ಮುಂಬೈ, ಆ 15 (DaijiworldNews/PY): "ದೇಶದ ಆರ್ಥಿಕತೆಗೆ ಉತ್ಪಾದನೆಯ ವಿಕೇಂದ್ರಿಕರಣದಿಂದ ಪ್ರಯೋಜನವಾಗಲಿದ್ದು, ಉದ್ಯೋಗ ಹಾಗೂ ಸ್ವ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಮುಂಬೈ ಶಾಲೆಯೊಂದರಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, "ಎಲ್ಲರ ಹಿತವನ್ನು ಪರಿಗಣಿಸಿದಾಗ ನಮಗೆ ಸಂತೋಷವಾಗುತ್ತದೆ. ಸಂತಸವಾಗಿರಲು ನಾವು ಉತ್ತಮ ಹಣಕಾಸು ಹೊಂದಿರಬೇಕು. ಇದಕ್ಕೆ ನಾವು ಹಣಕಾಸು ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಸ್ವದೇಶಿಯಾಗುವುದು ಎಂದರೆ ನಮ್ಮದೇ ಆದ ನಿಯಮಗಳು ಹಾಗೂ ಷರತ್ತುಗಳ ಆಧಾರದಲ್ಲಿ ವ್ಯವಹಾರ ನಡೆಸುವುದು" ಎಂದಿದ್ದಾರೆ.
"ನಾವು ಎಷ್ಟು ಸಂಪಾದನೆ ಮಾಡುತ್ತೇವೆ ಎನ್ನುವುದರ ಮೇಲೆ ಜೀವನದ ಗುಣಮಟ್ಟ ನಿರ್ಧರಿತವಾಗಬಾರದು. ನಾವು ಎಷ್ಟು ಮರಳಿ ನೀಡುತ್ತೇವೆ ಎನ್ನುವುದರ ಮೇಲೆ ತೀರ್ಮಾನಿಸಬೇಕು" ಎಂದು ತಿಳಿಸಿದ್ದಾರೆ.
"ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಹಾಗೂ ಪ್ರೋತ್ಸಾಹ ನೀಡುವುದು ಸರ್ಕಾರದ ಕಾರ್ಯವಾಗಿದೆ. ದೇಶದ ಅಭಿವೃದ್ದಿಗೆ ಯಾವುದು ಮುಖ್ಯ ಎನ್ನುವ ನಿರ್ದೇಶನಗಳನ್ನು ಸರ್ಕಾರ ನೀಡಬೇಕು" ಎಂದು ಹೇಳಿದ್ದಾರೆ.