ಬೆಳಗಾವಿ, ಆ 15 (DaijiworldNews/HR): ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಸಿದ್ದರಾಮಯ್ಯನವರು ಭವಿಷ್ಯ ಹೇಳುತ್ತಲೇ ಇದ್ದರೆ ಆದರೆ ಅವರ ಭವಿಷ್ಯ ಯಾವತ್ತೂ ಸತ್ಯವಾಗುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯರ ಅವರು ನುಡಿದ ಭವಿಷ್ಯ ಎಂದಿಗೂ ನಿಜ ಆಗುವುದಿಲ್ಲ. ಹೀಗಾಗಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ" ಎಂದರು.
ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಹಸ್ತಕ್ಷೇಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಅಂತಹ ಯಾವುದೇ ಬೆಳವಣಿಗೆ ಇಲ್ಲ. ಬೊಮ್ಮಾಯಿ ಅವರು ಅನುಭವಿಯಾಗಿದ್ದು ಒಳ್ಳೆಯ ಆಡಳಿತ ನೀಡುತ್ತಾರೆ" ಎಂದಿದ್ದಾರೆ.
ಇನ್ನು ಸಿ.ಟಿ.ರವಿ ಹಾಗೂ ಪ್ರಿಯಾಂಕ ಖರ್ಗೆ ಅವರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, "ಯಾರೇ ಆಗಲಿ ನಮ್ಮನ್ನು ಅಗಲಿ ಹೋಗಿರುವವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಬಾರದು. ಸಾರ್ವಜನಿಕ ಜೀವನದಲ್ಲಿ ಇರಬೇಕಾದರೆ ನಮ್ಮಿಂದ ಒಳ್ಳೆಯ ಕೆಲಸಗಳು ಆಗುತ್ತವೆ" ಎಂದು ಹೇಳಿದ್ದಾರೆ.