ಬೆಂಗಳೂರು, ಆ 15 (DaijiworldNews/PY): "ನಮ್ಮದು ಕಟ್ಟುವ ಪರಂಪರೆಯಾದರೆ, ಬಿಜೆಪಿಯವರದ್ದು ಉರುಳಿಸುವ ಪರಂಪರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ಕಾಂಗ್ರೆಸ್ ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, "ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಷಡ್ಯಂತ್ರ ನಡೆದಿದೆ. ಮಹನೀಯರ ಹೆಸರು ಬದಲಿಸಿದರೂ ಕೂಡಾ ಜನಮಾನಸದಲ್ಲಿ ಚಿರಸ್ಥಾಯಿ ಎನ್ನುವ ವಿಚಾರವನ್ನು ಮರೆಯಬಾರದು" ಎಂದಿದ್ದಾರೆ.
"ದೇಶ ಕಟ್ಟುವ ಸಂದರ್ಭ ಟೀಕೆ ಎದುರಾದರೂ ಕೂಡಾ ಹಿರಿಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ದ ಹೋರಾಟ ಮಾಡಬೇಕಿದೆ" ಎಂದು ಹೇಳಿದ್ದಾರೆ.
"ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಾವು ಈ ವೈಫಲ್ಯಗಳನ್ನು ಬಳಸಿಕೊಂಡು ರಾಜಕೀಯ ಮಾಡಬಹುದಾಗಿತ್ತು. ಆದರೆ, ನಾವು ಆ ರೀತಿಯಾದ ಕೆಲಸಕ್ಕೆ ಮುಂದಾಗಿಲ್ಲ. ನಮಗೆ ಅದರ ಅವಶ್ಯಕತೆಯೂ ಇಲ್ಲ. ಜನರ ಕಣ್ಣೀರಿಗೆ ಸ್ಪಂದಿಸುವುದಷ್ಟೇ ನಮಗೆ ಮುಖ್ಯ" ಎಂದಿದ್ದಾರೆ.