ವಿಜಯಪುರ, ಆ 15 (DaijiworldNews/HR): ನಾನು ಒಬ್ಬ ವಿಶೇಷ ಮಗನ ತಾಯಿ ಹಾಗಾಗಿ ಮಕ್ಕಳ ವಿಷಯದಲ್ಲಿ ನಾನು ತಪ್ಪು ಮಾಡಿಲ್ಲ. ನನ್ನ ವಿರುದ್ಧದ ಆರೋಪದ ತನಿಖೆಗೆ ನಾನು ಸದಾ ಸಿದ್ಧಳಾಗಿದ್ದೇನೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾನು ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರದಿಂದ ನಡೆದಿರುವ ಆಧಾರ ರಹಿತ ಆರೋಪದ ಕುರಿತು ತನಿಖೆ ಎದುರಿಸಲು ನಾನು ಸಿದ್ಧ" ಎಂದರು.
ಇನ್ನು "ನನ್ನ ವಿರುದ್ಧದ ಷಡ್ಯಂತ್ರದ ಬಳಿಕ ನನಗೆ ಹನ್ನೆರಡನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿ ಅವರ ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗೆ ಅಂಜಿದಡೆ ಎಂತಯ್ಯ ವಚನ ಸ್ಮರಣೆಗೆ ಬರುತ್ತದೆ" ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.