ಬೆಂಗಳೂರು, ಆ 15 (DaijiworldNews/PY): "ಇಂದಿನಿಂದಲೇ ನವಕರ್ನಾಟಕ ನಿರ್ಮಾಣ ಆರಂಭದ ಘೋಷಣೆ ಮಾಡಿದ್ದೇನೆ. ಹೊಸ ಚಿಂತನೆ, ಹೊಸ ದಾರಿ ಹಾಗೂ ಹೊಸ ದಿಕ್ಸೂಚಿ ಮೂಲಕ ನವ ಕರ್ನಾಟಕದ ನಿರ್ಮಾಣ ಮಾಡುತ್ತೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, "ರಾಜ್ಯದ ಜನತೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತವು ಯಶಸ್ವಿ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತವು, ಪ್ರಜಾಫ್ರಭುತ್ವ ಯಶಸ್ವಿಯಾಗಿರುವ ದೇಶಗಳಲ್ಲ ಅತಿದೊಡ್ಡ ದೇಶವಾಗಿದೆ. ಹಲವು ಸಂಸ್ಕೃತಿ, ಧರ್ಮಗಳನ್ನು ಒಳಗೊಂಡ ಭಾರತ, ಜನರಿಂದ ಜನರಿಗೋಸ್ಕರ ಇರುವ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಮಾಡಿಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಪ್ರಜಾಪ್ರಭುತ್ವ ಯಶಸ್ವಿಯಾಗಲು ಕಾರಣ" ಎಂದಿದ್ದಾರೆ.
"ರಾಣಿ ಚೆನ್ನಮ್ಮ ನಮ್ಮೆಲ್ಲರ ಅಭಿಮಾನದ ಸಂಕೇತ, ರೈತರು ಹಾಗೂ ಕಾರ್ಮಿಕ ಸತ್ಯಾಗ್ರಹ ಸ್ವಾತಂತ್ರ್ಯಕ್ಕೆ ಭದ್ರ ಬುನಾದಿ ಹಾಕಿವೆ. ಅವರನ್ನು ಸ್ಮರಿಸುತ್ತೇವೆ. ರಾಯಣ್ಣ ಅವರ ತ್ಯಾಗ, ಬಲಿದಾನ ಮಹತ್ವದಾಗಿದೆ. ರಾಯಣ್ಣ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದ್ದು, ಇದು ನಮಗೆ ಖುಷಿ ತಂದಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಭಾವಪೂರ್ಣ, ಭಕ್ತಿ ಪೂರ್ಣ ನಮನಗಳು" ಎಂದು ತಿಳಿಸಿದ್ದಾರೆ.
"ಸ್ವಾತಂತ್ರ್ಯಕ್ಕಾಗಿ ಗೋಪಾಲ್ ಕೃಷ್ಣ ಗೋಕುಲೆ, ಬಾಲಗಂಗಾಧರ್ ತಿಲಕ್, ಸುಭಾಸ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಅವರ ತ್ಯಾಗ ಬಲಿದಾನಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
"ರೈತ ಕೇಂದ್ರಿತ ಅಭಿವೃದ್ದಿ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ರೈತರ ಬದುಕಿನಲ್ಲಿ ಕ್ರಾಂತಿ ತರುವ ಸಮಯ ಬಂದಿದೆ. ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸುತ್ತೇನೆ. ನನಗೆ ನೀಡುರುವ 20 ತಿಂಗಳ ಅವಧಿಯಲ್ಲಿ ನಾನು ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆ. ಯೋಜನೆಗಳನ್ನು ಫಲಾನುಭವಿಗಳ ಮನೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇನೆ. ರಾಜ್ಯದ ಪ್ರತಿಯೋರ್ವರ ಬದುಕು ಹಸನಾಗುವುದು ಮುಖ್ಯ" ಎಂದಿದ್ದಾರೆ.
ಈ ವೇಳೆ ಸಿಎಂ ಬೊಮ್ಮಾಯಿ ಅವರು, ಅಮೃತ ಗ್ರಾಮ ಪಂಚಾಯತ್ ಯೋಜನೆ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ರೈತ ಉತ್ಪಾದಕರ ಸಂಸ್ಥೆ ಯೋಜನೆ, ಅಮೃತ ಶಾಲಾ ಸೌಲಭ್ಯ ಯೋಜನೆ, ಅಮೃತ ಕಿರು ಉದ್ದಿಮೆ ಯೋಜನೆ, ಅಮೃತ ಅಂಗನವಾಡಿ ಯೋಜನೆ ಸೇರಿದಂತೆ ವಿವಿಧ ಅಮೃತ ಯೋಜನೆಗಳನ್ನು ಘೋಷಣೆ ಮಾಡಿದರು.
"ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ಗ್ರಾಮೀಣ ಯೋಜನೆಯಡಿ ಗ್ರಾಮೀಣ ವಸತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. 750 ಗ್ರಾಮ ಪಂಚಾಯತ್ಗಳಲ್ಲಿ ವಸತಿ ರಹಿತರು, ಬಡವರನ್ನು ಗುರುತಿಸಿ ವಸತಿ ಯೋಜನೆ ರೂಪಿಸಲಾಗುತ್ತದೆ. ಅಮೃತ ರೈತ ಉತ್ಪಾದಕರ ಸಂಸ್ಥೆಯ ಮುಖೇನ ರೈತರಿಗೆ ವಿವಿಧ ಯೋಜನೆಗಳ ಪ್ರಯೋಜನ ನೀಡಲಾಗುತ್ತದೆ" ಎಂದಿದ್ದಾರೆ.
"ಅಮೃತ ಶಾಲಾ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, 750 ಶಾಲೆಗಳ ಅಭಿವೃದ್ದಿಗೆ ಈ ಮುಖೇನ ಕ್ರಮ ತೆಗೆದುಕೊಳ್ಳಲಾಗುವುದು. ಶಾಲೆಗಳಲ್ಲಿರುವ ಗ್ರಂಥಾಲಯ ಸೇರಿದಂತೆ ಸುಸಜ್ಜಿತ ಶಾಲೆಗಳ ನಿರ್ಮಾಣ, ಪ್ರಯೋಗಾಲಯ, ಶಾಲಾ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಅಮೃತ ಅಂಗನವಾಡಿ ಯೋಜನೆಯಿಂದ, ರಾಜ್ಯದಲ್ಲಿ 750 ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಪ್ರತಿ ಅಂಗನವಾಡಿಗಳಿಗೆ 1 ಲಕ್ಷ ನೀಡುವ ಮೂಲಕ ಅಭಿವೃದ್ದಿಪಡಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಅಮೃತ ನಿರ್ಮಲ ನಗರ ಯೋಜನೆಯಲ್ಲಿ, ಸ್ಥಳೀಯ ಸಂಸ್ಥೆಗಳನ್ನು 75 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯ ಕಾಪಾಡುವಂತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತೀ ಸ್ಥಳೀಯ ಸಂಸ್ಥೆಗಳಿಗೆ 1 ಕೋಟಿ ರೂ. ನೀಡಲಾಗುತ್ತದೆ. ಇದಕ್ಕಾಗಿ 75 ಕೋಟಿ ಅನುದಾನ ನೀಡಲಾಗುತ್ತದೆ" ಎಂದಿದ್ದಾರೆ.
"ಅಮೃತ ಕಿರು ಉದ್ದಿಮ ಯೋಜನೆಯಲ್ಲಿ ಸ್ವಸಹಾಯಕ ಸಂಘಗಳನ್ನು ಅಭಿವೃದ್ದಿಪಡಿಸಲಾಗುತ್ತದೆ" ಎಂದು ಹೇಳಿದ್ದಾರೆ.