ನವದೆಹಲಿ, ಆ 15 (DaijiworldNews/PY): "ಭಾರತವು ಹೊಸ ಸಂಕಲ್ಪದೊಂದಿಗೆ ಸಾಗುವ ಸಮಯ ಬಂದಿದೆ. ಹೊಸ ಸಂಕಲ್ಪದೊಂದಿಗೆ ಹೊಸ ಭಾರತ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸಲಾಗುತ್ತದೆ. ಅಲ್ಲಿಯ ತನಕ ಭಾರತದ ನಿರ್ಮಾಣವೇ ನಮ್ಮ ಗುರಿಯಾಗಿರಬೇಕು. ನಾವು ಯಾವ ರಾಷ್ಟ್ರಕ್ಕೂ ಕಡಿಮೆ ಇಲ್ಲ ಎನ್ನುವಂತೆ ಬೆಳೆಯಬೇಕು. ನಮ್ಮ ಎಲ್ಲಾ ಗುರಿಗಳ ಸಾಧನೆಗೆ ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಹಾಗೂ ಸಬ್ಕಾ ಪ್ರಯಾಸ್ ಬಹಳ ಮುಖ್ಯವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, "ಕಿತ್ತೂರು ರಾಣಿ ಚೆನ್ನಮ್ಮ, ಚಂದ್ರಶೇಖರ್ ಆಜಾದ್, ಮಹಾತ್ಮ ಗಾಂಧಿ ಹಾಗೂ ವಲ್ಲಭಬಾಯಿ ಪಟೇಲ್ ಸೇರಿದಂತೆ ಹಲವಾರು ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ಧಾರೆ. ಅವರಿಗೆಲ್ಲರಿಗೂ ನನ್ನ ನಮನಗಳು" ಎಂದು ತಿಳಿಸಿದರು.
ಈ ವೇಳೆ ಮಹತ್ವದ ಘೋಷಣೆ ಮಾಡಿದ ಪ್ರಧಾನಿ ಮೋದಿ, ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೂ ಪ್ರವೇಶ ನೀಡುವುದಾಗಿ ಘೋಷಿಸಿದ್ದಾರೆ.
"ಕೊರೊನಾದ ಸಂದರ್ಭ ವೈದ್ಯರು ಸೇರಿದಂತೆ ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಹಾಗೂ ಕೋಟ್ಯಾಂತರ ನಾಗರಿಕರು ಸೇವಾ ಮನೋಭಾವದಿಂದ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಕೊರೊನಾ ವಾರಿಯರ್ಸ್ಗಳಿಗೆ ನನ್ನ ಅಭಿನಂದನೆಗಳು" ಎಂದರು.
"ಟೋಕಿಯೊ ಒಲಿಂಪಿಕ್ಸ್ನಲ್ಲಿ ನಮ್ಮ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರ ಸಾಧನೆಯನ್ನು ಶ್ಲಾಘಿಸುವಂತೆ ನಮ್ಮ ರಾಷ್ಟ್ರವನ್ನು ಒತ್ತಾಯಿಸುತ್ತೇನೆ. ಅವರು ಭವಿಷ್ಯದ ಪೀಳಿಗೆಗೆ ಸ್ಪೂರ್ತಿ ನೀಡಿದ್ಧಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ಕೊರೊನಾ ವಿರುದ್ದದ ಹೋರಾಟದಲ್ಲಿ ಭಾರತೀಯರು ತಾಳ್ಮೆಯಿಂದ ಹೋರಾಡಿದ್ದಾರೆ. ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅಸಾಧಾರಣ ವೇಗದಲ್ಲಿ ಕೆಲಸ ಮಾಡಿದ್ದೇವೆ. ಇದು ನಮ್ಮ ಕೈಗಾರಿಕೋದ್ಯಮಿಗಳು ಹಾಗೂ ವಿಜ್ಞಾನಿಗಳ ಶಕ್ತಿಯ ಪರಿಣಾಮದಿಂದ ಆಗಿದೆ. ಭಾರತವು ಇಂದು ಲಸಿಕೆಗಳಿಗಾಗಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಭಿಸುವ ಅವಶ್ಯಕತೆ ಇಲ್ಲ. ಭಾರತದಲ್ಲಿ ಅತಿದೊಡ್ಡ ಕೊರೊನಾ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈವರೆಗೆ ಸುಮಾರು 54 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ" ಎಂದು ತಿಳಿಸಿದರು.
"ಕಳೆದ ಏಳು ವರ್ಷಗಳ ಅವಧಿಯಲ್ಲಿ ಕೋಟ್ಯಾಂತರ ಬಡವರ ಮನೆಬಾಗಿಲಿಗೆ ಅನೇಕ ಯೋಜನೆಗಳು ತಲುಪಿವೆ. ಇಂದು ಸರ್ಕಾರದ ಯೋಜನೆಗಳು ವೇಗ ಪಡೆದುಕೊಂಡಿವೆ. ಅಲ್ಲದೇ, ಅವುಗಳು ಶೀಘ್ರವೇ ಗುರಿಗಳನ್ನು ತಲುಪುತ್ತಿವೆ. 21 ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಯೋಜನೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಅಗತ್ಯ" ಎಂದು ಹೇಳಿದರು.
"ನಮ್ಮ ಹಳ್ಳಿಗಳು ಇಂದು ವೇಗವಾಗಿ ಬದಲಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಕಳೆದ ವರ್ಷಗಳಲ್ಲಿ ರಸ್ತೆ ಸೇರಿದಂತೆ ವಿದ್ಯುತ್ ಸೌಲಭ್ಯಗಳು ಹಳ್ಳಿಗಳನ್ನು ತಲುಪಿವೆ. ಇಂದು ಅಪ್ಟಿಕಲ್ ಫೈಬರ್ ನೆಟ್ವರ್ಕ್ ಹಳ್ಳಿಗಳಿಗೆ ಡೇಟಾ ಶಕ್ತಿಯನ್ನು ಒದಗಿಸುತ್ತಿದ್ದು, ಇಂಟರ್ನೆಟ್ ಅಲ್ಲಿಗೆ ತಲುಪುತ್ತಿವೆ. ಹಳ್ಳಿಗಳಲ್ಲೂ ಕೂಡಾ ಡಿಜಿಟಲ್ ಉದ್ಯಮಿಗಳು ರೂಪುಗೊಳ್ಳುತ್ತಿದ್ದಾರೆ" ಎಂದರು.
"ಮುಂಬರುವ ದಿನಗಳಲ್ಲಿ ನಾವು, ಪ್ರಧಾನಿ ಗತಿ ಶಕ್ತಿ ಯೋಜನೆಯನ್ನು ಆರಂಭಿಸುತ್ತೇವೆ. ಇದು 100 ಲಕ್ಷ ಕೋಟಿ ರೂ. ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಯೋಜನೆಯಾಗಿದೆ. ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯ ಹಾಗೂ ನಮ್ಮ ಆರ್ಥಿಕತೆಗೆ ಸಮಗ್ರವಾದ ಮಾರ್ಗವನ್ನು ನೀಡುತ್ತದೆ. ಭಾರತದಲ್ಲಿ ಇಂದು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇಲ್ಲ ಎನ್ನುವುದನ್ನು ಜಗತ್ತು ಕಾಣಬಹುದು. ಭಾರತವು ಆಡಳಿತದ ಹೊಸ ಅಧ್ಯಾಯವನ್ನು ಹೇಗೆ ಬರೆಯುತ್ತದೆ ಎನ್ನುವುದಕ್ಕೆ ಜಗತ್ತು ಸಾಕ್ಷಿಯಾಗಿದೆ" ಎಂದು ಹೇಳಿದರು.