ನವದೆಹಲಿ, ಆ.14 (DaijiworldNews/HR): ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಸ್ವಾತಂತ್ರ್ಯೋತ್ಸವ ದೇಶದ ಜನತೆ ಆಚರಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷವಾದ ಮಹತ್ವವಿದ್ದು, 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ನಡೆದಿದೆ. ಗಣರಾಜ್ಯ ಭಾರತದ 75 ವರ್ಷಗಳ ಪಯಣವನ್ನು ಹಿಂತಿರುಗಿ ನೋಡಿದಾಗ, ನಮ್ಮ ಯಾನದ ಬಗ್ಗೆ ಹೆಮ್ಮೆ ಪಡಲು ಕಾರಣಗಳು ಸಿಗುತ್ತವೆ. ಸರಿಯಾದ ದಿಕ್ಕಿನಲ್ಲಿ ನಿಧಾನ ಮತ್ತು ಸ್ಥಿರವಾದ ಹೆಜ್ಜೆಗಳನ್ನು ಹಾಕುವುದು ತಪ್ಪು ದಾರಿಯಲ್ಲಿ ತ್ವರಿತ ಹೆಜ್ಜೆಗಳನ್ನು ಹಾಕುವುದಕ್ಕಿಂತಲೂ ಸೂಕ್ತವೆಂದು ಗಾಂಧೀಜಿ ನಮಗೆ ಕಲಿಸಿದ್ದಾರೆ" ಎಂದರು.
ಇನ್ನು "ಟೋಕಿಯೊ ಒಲಿಂಪಿಕ್ಸ್ನಲ್ಲಿ ನಮ್ಮ ಕ್ರೀಡಾಪಟುಗಳು ತಮ್ಮ ಅದ್ಭುತ ಪ್ರದರ್ಶನದಿಂದ ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದ್ದು, ಭಾರತವು ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ 121 ವರ್ಷಗಳಲ್ಲೇ ಅತಿ ಹೆಚ್ಚು ಪದಕಗಳನ್ನು ಗೆದ್ದಿದೆ. ನಮ್ಮ ಹೆಣ್ಣುಮಕ್ಕಳು ಪ್ರತಿಕೂಲ ಪರಿಸ್ಥಿತಿಗಳನ್ನೂ ಮೀರಿ ಆಟದ ಮೈದಾನದಲ್ಲಿ ವಿಶ್ವಮಟ್ಟದ ಶ್ರೇಷ್ಠ ಸಾಧನೆ ಮಾಡಿದ್ದಾರೆ" ಎಂದಿದ್ದಾರೆ.
"ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ. ಆದರೆ ಕೊರೊನಾ ವೈರಸ್ ಇನ್ನೂ ದೂರವಾಗಿಲ್ಲ. ಅದರ ವಿನಾಶಕಾರಿ ಪರಿಣಾಮಗಳಿಂದ ನಾವು ಇನ್ನೂ ಹೊರಬಂದಿಲ್ಲ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು" ಎಂದು ಹೇಳಿದ್ದಾರೆ.