ಮಡಿಕೇರಿ, ಆ.14 (DaijiworldNews/HR): ನಕಲಿ ಕೊರೊನಾ ಪ್ರಮಾಣ ಪತ್ರಗಳೊಂದಿಗೆ ಕರ್ನಾಟಕದ ಕೊಡಗು ಜಿಲ್ಲೆಗೆ ಪ್ರವೇಶಿಸಲು ಪ್ರಯತ್ನಿಸಿದ ಕೇರಳ ಮೂಲದ ದಂಪತಿಯನ್ನು ಬಂಧಿಸಲಾಗಿದೆ.
ಸಾಂಧರ್ಭಿಕ ಚಿತ್ರ
ದಂಪತಿಗಳು ಗುರುವಾರ ತಡರಾತ್ರಿ ಕೊಡಗು ಜಿಲ್ಲೆಗೆ ಪ್ರವೇಶಿಸಲು ನಕಲಿಕೊರೊನಾ ನೆಗೆಟಿವ್ ಪರೀಕ್ಷಾ ವರದಿ ತಂದಿದ್ದು, ಅವರ ಅನುಮಾನಾಸ್ಪದ ನಡವಳಿಕೆಯಿಂದಾಗಿ ಸಂಶಯಗೊಂಡ ಪೊಲೀಸರು ಅವರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಬಂಧಿತರನ್ನು ಸೈಯದ್ ಮೊಹಮ್ಮದ್(32) ಮತ್ತು ಆತನ ಪತ್ನಿ ಬಿಎಂ ಆಯೇಷಾ ರೆಹಮಾನ್(27) ಎಂದು ಗುರುತಿಸಲಾಗಿದೆ.
ಸೈಯದ್ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರಾಗಿದ್ದು, ಆಯೇಷಾ ಕೊಡಗಿನ ಮಡಿಕೇರಿ ತಾಲ್ಲೂಕಿನವರು ಎಂದು ತಿಳಿದು ಬಂದಿದೆ.
ದಂಪತಿಯು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಮೂಲಕ ಮಾರುತಿ ಆಲ್ಟೊ ಕಾರಿನಲ್ಲಿ ಬಂದಿದ್ದು, ಇದು ರಾಜ್ಯದಲ್ಲಿ ನಕಲಿ ಕೊರೊನಾ ಪ್ರಮಾಣಪತ್ರಗಳನ್ನು ತಯಾರಿಸಿದ್ದಕ್ಕಾಗಿ ಜನರನ್ನು ಬಂಧಿಸಿದ ಮೊದಲ ಪ್ರಕರಣವಾಗಿದೆ.