ಶಿಮ್ಲಾ, ಆ.14 (DaijiworldNews/HR): ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಶನಿವಾರ ಮತ್ತೆ ಆರು ಶವಗಳು ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ರಾಜ್ಯ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಮಾಹಿತಿ ನೀಡಿದ್ದು, "ಇಂದು ನಡೆಸಿದ ಕಾರ್ಯಚರಣೆಯಲ್ಲಿ ಚೌರಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ಆರು ಶವಗಳು ಸಿಕ್ಕಿದ್ದು, ಇನ್ನುಳಿದ 9 ಮಂದಿಗಾಗಿ ಶೋಧ ಮುಂದುವರಿದಿದೆ" ಎಂದಿದ್ದಾರೆ.
ಇನ್ನು ಈ ಪ್ರದೇಶದಲ್ಲಿ ಭೂ ಕುಸಿತದ ಪರಿಣಾಮವಾಗಿ ಈಗಲೂ ಬಂಡೆಗಳು ಉರುಳುತ್ತಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಈ ಪ್ರದೇಶದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 9ವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನಿಚಾರ್ನ ಉಪ ವಿಭಾಗಾಧಿಕಾರಿ ಮನಮೋಹನ್ ಸಿಂಗ್ ಹೇಳಿದ್ಧಾರೆ.