ಬೆಂಗಳೂರು, ಆ 14 (DaijiworldNews/PY): "ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಶಾಲೆಗಳನ್ನು ಆರಂಭಿಸುವುದು ಬೇಡ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದಿದ್ದಲ್ಲಿ ಶಾಲೆಗಳ ಆರಂಭ ಬೇಡ. ಕೊರೊನಾ ಸೋಂಕು ಕಡಿಮೆಯಾದಲ್ಲಿ ಮಾತ್ರವೇ ಶಾಲೆಗಳನ್ನು ಆರಂಭಿಸಿ" ಎಂದಿದ್ದಾರೆ.
"ದಕ್ಷಿಣ ಕನ್ನಡ ಸೇರಿದಂತೆ ಕೊಡಗು ಹಾಗೂ ಮೈಸೂರು ಹಾಗೂ ಗಡಿಭಾಗದ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿ ಮಾಡಬೇಕು. ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿ. ವಿಕೇಂಡ್ ಲಾಕ್ಡೌನ್ ಮಾಡಿದರೆ ಮಾತ್ರ ಸಾಲದು, ಇನ್ನೂ ಕಟ್ಟುನಿಟ್ಟಾ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ತಿಳಿಸಿದ್ದಾರೆ.
"ವ್ಯಾಕ್ಸಿನ್ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ್ದು. ಸರ್ಕಾರ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಹಬ್ಬ, ಜಾತ್ರೆ ಒಂದು ವರ್ಷ ಮಾಡದಿದ್ದಲ್ಲಿ ಏನೂ ಆಗುವುದಿಲ್ಲ. ಗಣಪತಿಯನ್ನು ಮನೆಯಲ್ಲೇ ಕೂರಿಸಿ, ಮನೆಯಲ್ಲೇ ಹಬ್ಬ ಆಚರಿಸಿ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವ ಸಮಯದಲ್ಲಿ ಬೇಕಾದರೂ ಪತನವಾಗಬಹುದು" ಎಂದಿದ್ದಾರೆ.