ಕಲಬುರ್ಗಿ, ಆ 14 (DaijiworldNews/PY): ನೆಹರು ಹೆಸರಿನಲ್ಲಿ ಕಾಂಗ್ರೆಸ್ಸಿಗರು ಹುಕ್ಕಾ ಬಾರ್ ತೆರೆಯಲಿ ಎಂದ ಸಿ. ಟಿ ರವಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, "ವಾಜಪೇಯಿ ಹೆವಿ ಡ್ರಿಂಕರ್. ಪ್ರತಿದಿನ ಸಂಜೆ ಅವರಿಗೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು. ಹಾಗೆಂದು ಬಾರ್ಗೆ ವಾಜಪೇಯಿ ಹೆಸರಿಡುತ್ತೀರಾ?" ಎಂದು ಕೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, "ಸ್ವತಃ ವಾಜಪೇಯಿ ಅವರು ಕುಡಿಯುತ್ತಿದ್ದರಂತೆ. ತಪ್ಪಾ?. ಈ ಬಗ್ಗೆ ಯಾವುದೋ ಪತ್ರಿಕೆಯಲ್ಲಿ ವರದಿ ಕೂಡಾ ಬಂದಿತ್ತು. ವಾಜಪೇಯಿ ಅವರು ಹೆವಿ ಡ್ರಿಂಕರ್. ಅವರಿಗೆ ಪ್ರತಿದಿನ ಸಂಜೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು. ಯಾರೋ ಸಿಗರೇಟ್ ಸೇದಿದ ಮಾತ್ರಕ್ಕೆ ಅಥವಾ ಕುಡಿದ ಮಾತ್ರಕ್ಕೆ ನಾವು ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ" ಎಂದಿದ್ದಾರೆ.
"ದೇಶಕ್ಕೆ ವೀರ ಸಾವರ್ಕರ್ ಅವರ ಕೊಡುಗೆ ಏನು?. ಸಾರ್ವಕರ್ ಹೆಸರನ್ನು ಫ್ಲೈ ಓವರ್ಗೆ ಇಡುವ ಬದಲು ಬಾರ್ಗೆ ಇಡುತ್ತಾರೆಯೇ" ಎಂದು ಲೇವಡಿ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಬಗ್ಗೆ ಸಿ ಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಇತಿಹಾಸದ ಬಗ್ಗೆ ತಿಳಿಯದೇ ಇದ್ದವರು ಮಂತ್ರಿಯಾದರೆ ಇದೇ ಆಗುವುದು. ಇವರು ಗೋಡ್ಸೆಯನ್ನು ನಂಬುತ್ತಾರೆ. ಆದರೆ, ಮಹಾತ್ಮ ಗಾಂಧಿಯನ್ನು ನಂಬುವುದಿಲ್ಲ" ಎಂದಿದ್ದಾರೆ.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷವಾಗಿದೆ. ಆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ಮಾತ್ರ ನಡೆದಿಲ್ಲ. ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಜರ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಿ. ಟಿ ರವಿ ಅವರು ಯಾವುದೋ ನಿರಾಸೆಯಲ್ಲಿ ಈ ಹೇಳಿಕೆ ನೀಡುತ್ತಿದ್ದಾರೆ. ಅವರ ಈ ಹೇಳಿಕೆಯಿಂದ ನೆಹರು ಘನತೆ ಕಡಿಮೆಯಾಗುವುದಿಲ್ಲ ಅಥವಾ ನಾವು ಹೀಗೆ ಹೇಳುವುದರಿಂದ ವಾಜಪೇಯಿ ಅವರ ಘನತೆ ಕುಗ್ಗುವುದಿಲ್ಲ. ಆದರೆ, ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮೊದಲು ಜನಪರ, ಅಭಿವೃದ್ದಿ ಕಾರ್ಯಗಳ ಬಗ್ಗೆ ಗಮನಹರಿಸಿ. ಈ ರೀತಿಯಾದ ಹೇಳಿಕೆಗಳನ್ನು ನೀಡುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಸೂಕ್ತವಲ್ಲ" ಎಂದಿದ್ದಾರೆ.