ಪಣಜಿ, ಆ 14 (DaijiworldNews/MS): ಸ್ಥಳೀಯರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಪಟ್ಟಣದ ಸಮೀಪ ಇರುವ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದ್ದು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಿಡಿಮಿಡಿಗೊಂಡಿದ್ದು ಧ್ವಜಾರೋಹಣ ಕಾರ್ಯಕ್ರಮ ನಿಗದಿಯಂತೆ ಮುಂದುವರಿಸುವಂತೆ ಸೂಚಿಸಿದ್ದಾರೆ. ಮಾತ್ರವಲ್ಲದೆ ದ್ವೀಪವಾಸಿಗಳಿಗೆ ಯಾವುದೇ "ಭಾರತ ವಿರೋಧಿ ಚಟುವಟಿಕೆಗಳನ್ನು" "ಕಟ್ಟುನಿಟ್ಟಿನ ಕ್ರಮ" ದೊಂದಿಗೆ ನಿಭಾಯಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ 'ಆಜಾದಿ ಕಾ ಅಮೃತ್ ಮಹೋತ್ಸವ'ವದ ಭಾಗವಾಗಿ ಆಗಸ್ಟ್ 13 ಮತ್ತು 15ರ ನಡುವೆ ರಾಷ್ಟ್ರದಾದ್ಯಂತ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ರಕ್ಷಣಾ ಸಚಿವಾಲಯ ಉದ್ದೇಶಿಸಿತ್ತು. ಈ ಪ್ಯಾನ್-ಇಂಡಿಯಾ ಉಪಕ್ರಮದ ಭಾಗವಾಗಿ ಗೋವಾ ನೌಕಾ ಪ್ರದೇಶದ ತಂಡವು ಸಾವೊ ಜಾಸಿಂಟೊ ದ್ವೀಪ ಸೇರಿದಂತೆ ಗೋವಾ ದ್ವೀಪಗಳಿಗೆ ಭೇಟಿ ನೀಡಿತು.
ಆದರೆ, ನಿವಾಸಿಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಸಾವೊ ಜಸಿಂಟೊ ದ್ವೀಪದಲ್ಲಿನ ಯೋಜನೆಯನ್ನು ರದ್ದುಗೊಳಿಸಬೇಕಾಯಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದರು.
"ನಿಗದಿತ ಕಾರ್ಯಕ್ರಮದಂತೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ನೌಕಾಪಡೆ ಅಧಿಕಾರಿಗಳಿಗೆ ನಾನು ಮನವಿ ಮಾಡಿದ್ದೇನೆ. ದ್ವೀಪದಲ್ಲಿ ಕೆಲವರು ಧ್ವಜಾರೋಹಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಇಂತಹ "ಭಾರತ ವಿರೋಧಿ" ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ್ ಹೇಳಿದ್ದಾರೆ.