ಬೆಂಗಳೂರು, ಆ 14 (DaijiworldNews/PY): "ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣದ ಸೂತ್ರಧಾರಿಗಳು ಬೇರೆಯೇ ಇದ್ದಾರೆ" ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭ, ಕೆಲಸಕ್ಕಾಗಿ ಆರೋಪಿಯೋರ್ವ ಹಲವು ಭಾರಿ ಭೇಟಿ ಮಾಡಲು ಯತ್ನಿಸಿದ್ದ. ಆದರೂ ಅವಕಾಶ ನೀಡಿಲ್ಲ. ಹಾಗಾಗಿ ಕಾರಿಗರ ಬೆಂಕಿ ಹಚ್ಚಿದೆ. ದೊಡ್ಡ ವ್ಯಕ್ತಿಯ ಕಾರಿಗೆ ಬೆಂಕಿ ಹಚ್ಚಿದರೆ ಭಯಹುಟ್ಟಿಸಬಹುದು ಎನ್ನುವ ಕಾರಣಕ್ಕೆ ಕೃತ್ಯವೆಸಗಿದ್ದಾಗಿ ಓರ್ವ ತಿಳಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ, ಬಂಧಿತ ಆರೋಪಿಗಳ ಮಾತನ್ನು ಒಪ್ಪಲಾಗದು. ಇವರು ಕೇವಲ ಪಾತ್ರದಾರಿಗಳು ಇವರ ಹಿಂದಿಮ ಸೂತ್ರಧಾರಿಗಳು ಬೇರೆಯೇ ಇದ್ದಾರೆ" ಎಂದಿದ್ದಾರೆ.
"ಬಂಧಿತ ಆರೋಪಿಗಳ ಪೈಕಿ ಓರ್ವ ಕುಡುಕ, ಇನ್ನೋರ್ವ ಡ್ರಗ್ ಎಡಿಕ್ಟ್. ಹಗಲಲ್ಲಿ ನನ್ನನ್ನು ಭೇಟಿಯಾಗಲು ಬಾರದೇ ರಾತ್ರಿ ವೇಳೆ ಒಂಟಿಯಾಗಿ ಭೇಟಿ ಮಾಡಲು ಯತ್ನಿಸಿದ್ದಾರೆ ಎಂದರೆ, ಇದರ ಹಿಂದೆ ಅವರ ದುರದ್ದೇಶ ಇದೆ ಎನ್ನುವುದು ಸ್ಪಷ್ಟ. ಅಲ್ಲದೇ, ಕೇಬಲ್ ಮಾಫಿಯಾ ಬಗ್ಗೆ ಕೂಡಾ ಅನುಮಾನವಿದೆ. ಕೆಲವೊಂದು ವಿಚಾರದ ಬಗ್ಗೆ ನನಗೆ ಮಾಹಿತಿ ದೊರೆತಿದೆ. ಆದರೆ, ನಾನು ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಈ ವಿಚಾರವನ್ನು ನೇರವಾಗಿ ಗೃಹ ಸಚಿವರಿಗೆ ತಿಳಿಸುತ್ತೇನೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಪೊಲೀಸರ ತನಿಖೆಯ ನಂತರ ಎಲ್ಲಾ ವಿಚಾರ ಹೊರಬರಲಿದೆ" ಎಂದು ತಿಳಿಸಿದ್ದಾರೆ.