ಬೆಂಗಳೂರು, ಆ 14 (DaijiworldNews/MS): ಕೋವಿಡ್ 3ನೇ ಅಲೆ ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹಾಗೂ ವೀಕೆಂಡ್ ಕರ್ಫ್ಯೂ ಬಗ್ಗೆ ಇಂದು ಸಂಜೆ ನಡೆಯಲಿರುವ ತಜ್ಞರು, ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೋವಿಡ್ ಮೊದಲ ಹಾಗೂ 2ನೇ ಅಲೆಯ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನಹರಿಸಲಾಗುವುದು. ಅದಕ್ಕಾಗಿ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಲಾಕ್ ಡೌನ್ ಹೇರಿದರೆ ಜನರಿಗೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಇತರ ಸಂಭವನೀಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂದು ಸಾಯಂಕಾಲ ಕೋವಿಡ್ ಸಂಬಂಧಿ ಸಭೆಯನ್ನು ತಜ್ಞರ ಜೊತೆ ಮಾಡುತ್ತೇನೆ, ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಜನರ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗದಂತೆ ಏನು ಕಠಿಣ ಕ್ರಮ ಕೈಗೊಳ್ಳಬಹುದು ಎಂದು ವೈಜ್ಞಾನಿಕವಾಗಿ ತೀರ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಒಟ್ಟಾರೆ ಬೆಂಗಳೂರು ಸೇರಿದಂತೆ ಜಿಲ್ಲೆಗಳಿಗೆ ಕೊರೋನಾ ಮೂರನೇ ಅಲೆಯನ್ನು ಆರಂಭದಲ್ಲಿಯೇ ನಿಯಂತ್ರಿಸಲು ಹೊಸ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.