ನವದೆಹಲಿ, ಆ 14 (DaijiworldNews/PY): ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಶನಿವಾರ ಅನ್ಲಾಕ್ ಮಾಡಲಾಗಿದೆ.
ರಾಹುಲ್ ಗಾಂಧಿ ಅವರು ಕಳೆದ ವಾರ, ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗಿನ ಫೋಟೋವನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದರು. ಈ ಕಾರಣಕ್ಕೆ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಲಾಕ್ ಮಾಡಲಾಗಿತ್ತು.
ಇದೀಗ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಲಾಗಿದ್ದು, ರಾಹುಲ್ ಅವರ ಚಿತ್ರಗಳ್ನು ಹಂಚಿಕೊಂಡ ಕೆಲ ಪಕ್ಷದ ನಾಯಕರ ಟ್ವಿಟರ್ ಖಾತೆಗಳನ್ನ ಕೂಡಾ ಅನ್ಲಾಕ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಟ್ವಿಟರ್ ಖಾತೆ ಲಾಕ್ ಬಗ್ಗೆ ಯೂಟ್ಯೂಬ್ ಚಾನೆಲ್ನಲ್ಲಿ ಪ್ರತಿಕ್ರಿಯೆ ನೀಡಿದ್ದ ಅವರು, "ದೇಶದ ರಾಜಕಾರಣದ ಮೇಲೆ ಟ್ವಿಟರ್ ಹಸ್ತಕ್ಷೇಪ ಮಾಡುತ್ತಿದೆ. ಇದು ಪ್ರಜಾಫ್ರಭುತ್ವದ ಮೇಲಿನ ದಾಳಿಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದರು.
"ಟ್ವಿಟರ್ ಅನ್ನು ಲಾಕ್ ಮಾಡುವ ಮೂಲಕ ಟ್ವಿಟರ್ ಸಂಸ್ಥೆಯು ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ, ರಾಜಕೀಯ ವ್ಯಾಖ್ಯಾನಿಸಲು ಕಂಪೆನಿಯು ತನ್ನ ವ್ಯಾಪಾರವನ್ನು ಮಾಡುತ್ತಿದೆ. ರಾಜಕಾರಣಿಯಾಗಿ ಅದು ನನ್ನೆ ಇಷ್ಟವಿಲ್ಲ" ಎಂದಿದ್ದರು.
"ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶವಿಲ್ಲ. ಮಾಧ್ಯಮಗಳು ಕೂಡಾ ನಿಯಂತ್ರಿಸಲ್ಪಟ್ಟಿವೆ. ಟ್ವಿಟರ್ ಪಕ್ಷಪಾತದ ವೇದಿಕೆಯಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಟ್ವಿಟರ್ ತನ್ನ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಬೇಕು" ಎಂದು ಒತ್ತಾಯಿಸಿದ್ದರು.