ಯಳಂದೂರು, ಆ 14 (DaijiworldNews/PY): ಪ್ರೀತಿಸಿದ ಹುಡುಗಿ ತನ್ನನ್ನು ಒಪ್ಪಿಕೊಳ್ಳಲಿಲ್ಲ ಎನ್ನುವ ಕಾರಣಕ್ಕೆ ಪ್ರೇಮಿಯೋರ್ವ ಹುಡುಗಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿಹಾಕಿಕೊಂಡು ತಾನೂ ಸತ್ತು, ಆಕೆಯ ಸಾವಿಗೂ ಕಾರಣನಾದ ಘಟನೆ ಮಾಂಬಳ್ಳಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಾಂಬಳ್ಳಿ ಗ್ರಾಮದ ಶ್ರೀನಿವಾಸ್ (23) ಹಾಗೂ ಅದೇ ಗ್ರಾಮದ ಕಾಂಚನಾ (22) ಎಂದು ಗುರುತಿಸಲಾಗಿದೆ.
ಕಾರಿನ ಒಳಭಾಗಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಕಾರಿನ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರಿನ ಒಂದೇ ಸೀಟ್ನಲ್ಲಿ ಇಬ್ಬರ ತಲೆಬರುಡೆಗಳು ಮಾತ್ರವೇ ಕಂಡುಬಂದಿವೆ.
ಜಿಲ್ಲಾಸ್ಪತ್ರೆಯಲ್ಲಿ ಕಾಂಚನ ಅವರು ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಕೃಷಿಕರಾಗಿದ್ದು, ಕ್ಯಾಬ್ ಚಾಲಕನಾಗಿದ್ದರು. ಈ ಹಿಂದೆ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಇಬ್ಬರೂ ಸಹಪಾಠಿಗಳಾಗಿದ್ದರು. ಕಾಂಚನ ಅವರನ್ನು ಶ್ರೀನಿವಾಸ್ ಅವರು ಹಲವು ಸಮಯದಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಇದು ಕಾಂಚನ ಕುಟುಂಬದವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಕಾಂಚನ ಕೂಡಾ ಶ್ರೀನಿವಾಸ್ ಅವರಿಂದ ದೂರ ಇದ್ದರು ಎನ್ನಲಾಗಿದೆ.
ಶ್ರೀನಿವಾಸ್ ಅವರು ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಂಚನ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮಾಂಬಳ್ಳಿಯಿಂದ ಕಿನಕಳ್ಳಿಗೆ ಹೋಗುವ ಮುಖ್ಯ ರಸ್ತೆಯಿಂದ 2 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ವೇಳೆ ಪಕ್ಕದ ಜಮೀನಿನಲ್ಲಿ ಹಸು ಮೇಯಿಸಿಕೊಂಡಿದ್ದ ವ್ಯಕ್ತಿಯೋರ್ವರು ಕಾರು ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಎಂದು ಭಾವಿಸಿದ್ದರು. ಆದರೆ, ಕಾರಿನ ಸಮೀಪ ಹೋಗಿ ಇಣುಕಿ ನೋಡಿದ ಸಂದರ್ಭ ಕಾರಿನ ಒಳಗಡೆ ಒಂದೇ ಸೀಟ್ನಲ್ಲಿ ಎರಡು ತಲೆಬರುಡೆಗಳು ಮಾತ್ರ ಕಂಡುಬಂದಿವೆ.
ಪ್ರಾರಂಭದಲ್ಲಿ ಇದು ಪ್ರೇಮಿಗಳ ಆತ್ಮಹತ್ಯೆ ಎನ್ನಲಾಗುತ್ತಿತ್ತು. ಆದರೆ, ವಿಚಾರಣೆ ಬಳಿಕ ಕಾಂಚನ ಅವರು ಶ್ರೀನಿವಾಸ್ ಅವರನ್ನು ಇಷ್ಟಪಡುತ್ತಿರಲಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಅಗರ-ಮಾಂಬಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಚ್.ಬಿ.ಮಾದೇಗೌಡ, "ನಾವು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶ್ರೀನಿವಾಸ್, ಹುಡುಗಿಯನ್ನು ಪ್ರೀತಿಸುತ್ತಿದ್ದುದು ನಿಜ. ಆದರೆ, ನನಗೆ ಆತ ಇಷ್ಟ ಇಲ್ಲ ಎಂದು ಕಾಂಚನ ಮನೆಯವರ ಬಳಿ ಕೇಳಿದ್ದಳು" ಎಂದು ತಿಳಿದುಬಂದಿದೆ ಎಂದಿದ್ದಾರೆ.
"ಇದೇ ವಿಚಾರಕ್ಕಾಗಿ ಶ್ರೀನಿವಾಸ್ ಮೂರು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಅವರು ಅದೃಷ್ಟವಶಾತ್ ಬದುಕುಳಿದಿದ್ದರು" ಎಂದು ಶ್ರೀನಿವಾಸ್ ಅವರ ಸ್ನೇಹಿತರು ಹೇಳಿದ್ದಾರೆ.