ಮುಂಬೈ, ಆ.13 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಪೊಲೀಸರ ಅತಿಥಿ ಆಗಿದ್ದು, ಮತ್ತೊಂದೆಡೆ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ಮೇಲೆ ಚೀಟಿಂಗ್ ಕೇಸ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಲಖನೌ ಪೊಲೀಸರು ಶಿಲ್ಪಾಗೆ ನೋಟಿಸ್ ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ನಟನೆಯೊಂದಿಗೆ ಫಿನ್ನೆಟ್ ಕೇಂದ್ರವನ್ನೂ ನಡೆಸುತ್ತಿದ್ದು, ಅದಕ್ಕೆ ಶಿಲ್ಪಾ ಶೆಟ್ಟಿ ಮುಖ್ಯಸ್ಥೆಯಾಗಿದ್ದರೆ, ಅವರ ತಾಯಿ ಸುನಂದಾ ನಿರ್ದೇಶಕಿ ಆಗಿದ್ದಾರೆ. ಅದರ ಶಾಖೆಯನ್ನು ಬೇರೆ ಬೇರೆ ನಗರಗಳಲ್ಲಿ ಆರಂಭ ಮಾಡುವುದು ಅವರ ಪ್ಲ್ಯಾನ್. ಹೊಸ ಶಾಖೆ ಆರಂಭಿಸುವುದಾಗಿ ಭರವಸೆ ನೀಡಿ, ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಪಡೆದಿರುವ ಶಿಲ್ಪಾ ಮತ್ತು ಸುನಂದಾ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಈ ಸಂಬಂಧ ಜೋಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ಎಂಬುವವರು ದೂರು ದಾಖಲಿಸಿದ್ದು, ಲಖನೌನ ಹಜರತ್ಗಂಜ್ ಮತ್ತು ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಲು ಲಖನೌ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಈಗ ಲಖನೌ ಪೊಲೀಸರು ಶಿಲ್ಪಾಗೆ ನೋಟಿಸ್ ನೀಡಿದ್ದಾರೆ.