ಬೆಂಗಳೂರು, ಆ.13 (DaijiworldNews/HR): ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಮಾಲೀಕತ್ವದ ಬಿಬಿಎಂಪಿ ದಾಸರಹಳ್ಳಿಯ ಜಾಲಹಳ್ಳಿ ಕ್ರಾಸ್ ಬಳಿ ಇರುವ 'ರಾಕ್ಲೈನ್ ಮಾಲ್'ನಿಂದ 8.5 ಕೋಟಿ ರೂ. ಆಸ್ತಿ ತೆರಿಗೆ ವಂಚನೆ ಆಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಾಗೂ ಬಿಎಂಟಿಎಫ್ ಗೆ ದೂರು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್, " 2012 ರಿಂದ 21 ರವರೆಗಿನ ತೆರಿಗೆ, ದಂಡ, ಉಪಕರ ಸೇರಿಸಿ 8,51,56,751 ರಷ್ಟು ಆಸ್ತಿ ತೆರಿಗೆಯನ್ನು ಪಾವತಿಸಬೇಕಿದೆ. 2012 ರಲ್ಲಿ ಕೇವಲ 3,78,016 ರೂ.ಗಳನ್ನು ಪಾವತಿಸುವ ಮೂಲಕ ಪಾಲಿಕೆಗೆ ದೊಡ್ಡ ಮಟ್ಟದ ತೆರಿಗೆ ವಂಚನೆ ಮಾಡಿದ್ದಾರೆ" ಎಂದಿದ್ದಾರೆ.
ಇನ್ನು ರಾಕ್ಲೈನ್ ವೆಂಕಟೇಶ್ ಅವರು ನಿರಂತರವಾಗಿ ಪಾಲಿಕೆಗೆ ವಂಚನೆ ಮಾಡಿಕೊಂಡು ಬರುತ್ತಿದ್ದಾರೆ ಅಂತ ಕಿಡಿಕಾರಿದ ರಮೇಶ್, ಈ ಬಗ್ಗೆ ಪಾಲಿಕೆ ನೋಟಿಸ್ ನೀಡಿದ್ದರು ಕೂಡ ಅವರು ನ್ಯಾಯ ಒದಗಿಸುತ್ತಿಲ್ಲ.. ಇದಲ್ಲದೇ ತಮ್ಮ ಆಸ್ತಿ ಬಗ್ಗೆ ಕೂಡ ಅವರು ಮರೆಮಾಚುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ರಾಕ್ಲೈನ್ ವೆಂಕಟೇಶ್ ವಿರುದ್ದ ಕೂಡಲೇ ಕ್ರಮ ಕೊಳ್ಳುವಂತೆ ಅಧಿಕಾರಿಗಳಿಗೆ ರಮೇಶ್ ಆಗ್ರಹಿಸಿದ್ದಾರೆ.