ರಾಮನಗರ, ಆ 13 (DaijiworldNews/PY): "ಕರ್ನಾಟಕವು ಮೇಕೆದಾಟು ವಿಚಾರದಲ್ಲಿ ತನ್ನ ಹಕ್ಕನ್ನು ಮಾತ್ರವೇ ಪ್ರತಿಪಾದಿಸುತ್ತಿದೆ. ನಮಗೆ ನೆರೆ ರಾಜ್ಯದ ಒಂದು ಹನಿ ನೀರು ಬೇಕಾಗಿಲ್ಲ" ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾನೂನಾತ್ಮಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಮನಗೆ ಹಂಚಿಕೆಯಾಗಿರುವ ನೀರನ್ನು ಮಾತ್ರವೇ ನಾವು ಕೇಳುತ್ತಿದ್ದೇವೆ. ಅದನ್ನು ಬಳಸಿಕೊಳ್ಳಲು ಅಗತ್ಯವಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದಿದ್ದಾರೆ.
"ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಕುರಿತು ಸ್ಪಷ್ಟತೆ ಇದೆ. ಯಾವುದೇ ರೀತಿಯಾದ ಗೊಂದಲಕ್ಕೆ ಅವಕಾಶವಿಲ್ಲ. ಅಲ್ಲದೇ, ಈ ಯೋಜನೆಯ ಕುರಿತು ಉಪೇಕ್ಷೆ ಮಾಡುವ ಪ್ರಶ್ನೆಯೂ ಇಲ್ಲ. ರಾಜಿ ಮಾತಂತು ಇಲ್ಲವೇ ಇಲ್ಲ" ಎಂದು ತಿಳಿಸಿದ್ದಾರೆ.
"ಕಾನೂನು ಎನ್ನುವುದು ಎಲ್ಲರಿಗೂ ಒಂದೇ. ಈ ಯೋಜನೆ ನ್ಯಾಯ ಸಮ್ಮತವಾಗಿಯೇ ಆಗುತ್ತಿದೆ. ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನೀಡಿದ ಅಭಿಪ್ರಾಯವನ್ನೇ ತಮಿಳುನಾಡು ತನಗೆ ಬೇಕಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುತ್ತಿದೆ" ಎಂದಿದ್ದಾರೆ.
ಮೇಕೆದಾಟು ವಿಚಾರದಲ್ಲಿ ನಮಗೆ ನಮ್ಮ ದೇಶವೇ ಮುಖ್ಯ ಎಂದ ಸಿ ಟಿ ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅವರ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಮೇಕೆದಾಟು ಯೋಜನೆ ಕುರಿತು ರಾಜ್ಯದ ನಿಲುವು ಬದಲಾಗುವುದಿಲ್ಲ" ಎಂದು ಹೇಳಿದ್ದಾರೆ.