ಬೆಂಗಳೂರು, ಆ.13 (DaijiworldNews/HR): "ಆಟೋ ರಿಕ್ಷಾ, ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಅಂತವರ ಕುಟುಂಬಗಳಿಗೆ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು" ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನೂ ಕೂಡ ಒಂದು ಕಾಲದಲ್ಲಿ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಕಾರ್ಮಿಕರು ಮೃತಪಟ್ಟರೆ ಐದು ಲಕ್ಷ ಪರಿಹಾರ ಕೊಡುವ ಹೊಸ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು" ಎಂದರು.
ಇನ್ನು "ಕಾರ್ಮಿಕ ಇಲಾಖೆಯಲ್ಲಿ ನಾನು ದೃಢ ಹೆಜ್ಜೆ ಇಡಬೇಕೆಂದು ಸಂಕಲ್ಪ ಮಾಡಿಕೊಂಡಿದ್ದು, ಈ ಮಸೂದೆಯನ್ನು ಜಾರಿ ಮಾಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಈಗಾಗಲೇ ಇಲಾಖೆಯಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಇದರಿಂದ ಕಾರ್ಮಿಕ ವರ್ಗಕ್ಕೆ ಬಹುದೊಡ್ಡ ಅನುಕೂಲವಾಗಲಿದೆ" ಎಂದಿದ್ದಾರೆ.
"ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಜಾಗೃತಿ ಜಾಥಾವನ್ನು ರಚನೆ ಮಾಡಲಾಗುವುದು. ವಲಸೆ ಕಾರ್ಮಿಕರಿಗೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ವಸತಿ ಸಮ್ಮುಚ್ಚಯ ಕಟ್ಟಲು ತೀರ್ಮಾನಿಸಲಾಗಿದೆ" ಎಂದು ಹೇಳಿದ್ದಾರೆ.