ಬೆಂಗಳೂರು, ಆ 13 (DaijiworldNews/PY): "ಕರೋನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ, ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ" ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರೋನಾ 3ನೇ ಅಲೆಯ ಆತಂಕ ಕಾಡುತ್ತಿರುವಾಗ ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರ ಇನ್ನೂ ಟೇಕಾಫ್ ಆಗಲೇ ಇಲ್ಲ, ಸಚಿವರು ತಮ್ಮ ಕೆಲಸ ಶುರು ಮಾಡಲಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಆಂತರಿಕ ಕಿತ್ತಾಟಗಳ ಸಂಧಾನ ಸಭೆಗಳಲ್ಲಿಯೇ ತಮ್ಮ ಅಧಿಕಾರವಧಿಯನ್ನ ಕಳೆಯುತ್ತಿದ್ದಾರೆ. ಬಿಜೆಪಿ ಪಕ್ಷ ಕರೊನಾಗಿಂತಲೂ ಭೀಕರ ಸೋಂಕು" ಎಂದಿದೆ.
"ಚಿಕ್ಕಮಗಳೂರಿನ ಮೂಡಿಗೆರೆಗೆ ನೆರೆ ಪರಿಹಾರವಿಲ್ಲ ಎಂದು ಬಿಜೆಪಿ ಶಾಸಕ ತಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರೆ, ಅದೇ ಜಿಲ್ಲೆಯ ಸಿಟಿ ರವಿ 'ಚೆಂಡು ಹೂವಿನ ಗಿಡ' ಸೇವಿಸಿ ಬಾಯಿಗೆ ಬಂದಂತೆ ಮಾತಾಡುತ್ತಾ ತಿರುಗುತ್ತಿದ್ದಾರೆ! ತನ್ನ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡುವುದು ಅವರ ಆದ್ಯತೆ ಅಲ್ಲವೇ ಅಲ್ಲ" ಎಂದು ಹೇಳಿದೆ.
"ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂದರೆ, ಆಡಳಿತ ಪಕ್ಷದ ಶಾಸಕರೇ ಕಣ್ಣೀರು ಹಾಕುವಂತೆ! ತಮ್ಮದೇ ಪಕ್ಷದ ಶಾಸಕರ ಅಳಲು ಕೇಳದ ಈ ಸರ್ಕಾರ ಜನರ ನೋವು ಕೇಳಿಸಿಕೊಳ್ಳುವುದು ದೂರದ ಮಾತು, ನೆರೆ ಸಂತ್ರಸ್ತರನ್ನು ಕಡೆಗಣಿಸಿದ ಬಿಜೆಪಿ ಪಕ್ಷಕ್ಕೆ ನಾಚಿಕೆ ಆಗಬೇಕಿತ್ತು, ಆದರೆ ಅವರು ಲಜ್ಜೆ ಬಿಟ್ಟಿರುವುದರಿಂದ ಆಗುತ್ತಿಲ್ಲ!" ಎಂದು ಟೀಕಿಸಿದೆ.