ನವದೆಹಲಿ, ಆ 13 (DaijiworldNews/PY): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆ ನಿರ್ಬಂಧಿಸಿದ ಕೆಲವು ದಿನಗಳ ಬಳಿಕ, ಈಗ ಅವರ ಇನ್ಸ್ಟಾಗ್ರಾಂ ಖಾತೆಯ ವಿರುದ್ದವೂ ಇದೇ ರೀತಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಫೇಸ್ಬುಕ್ ಅನ್ನು ಒತ್ತಾಯಿಸಿದೆ.
ಈ ಬಗ್ಗೆ ಎನ್ಸಿಪಿಸಿಆರ್ ಫೇಸ್ಬುಕ್ಗೆ ಪತ್ರ ಬರೆದಿದ್ದು, "ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ, ಕೊಲೆಯಾಗಿರುವ ಬಾಲಕಿಯ ಕುಟುಂಬದವರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸಂತ್ರಸ್ತೆ ಅಪ್ಪ, ಅಮ್ಮನ ಮುಖ ಸ್ಪಷ್ಟವಾಗಿ ಕಾಣಿಸುತ್ತದೆ. ಇದು ಕಾನೂನಿನಲ್ಲಿರುವ ನಿಗದಿತ ನಿಬಂಧನೆಗಳ ಉಲ್ಲಂಘನೆಯಾಗುತ್ತದೆ" ಎಂದು ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗಸ್ಟ್ 4ರಂದು ಟ್ವಿಟರ್ಗೆ ಪತ್ರ ಬರೆದಿದ್ದ ಎನ್ಸಿಪಿಸಿಆರ್, ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು. ಈ ದೂರನ್ನು ಆಧರಿಸಿದ ಟ್ವಿಟರ್ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಲಾಕ್ ಮಾಡಿತ್ತು. ಇದೀಗ ಇನ್ಸ್ಟಾಗ್ರಾಂ ಖಾತೆ ವಿರುದ್ದವೂ ಇದೇ ರೀತಿಯಾದ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ.
"ರಾಹುಲ್ ಗಾಂಧಿಯವರ ಈ ನಡೆಯಿಂದ ಬಾಲ ನ್ಯಾಯ ಕಾಯ್ದೆ- 2015, ಪೋಕ್ಸೊ ಕಾಯ್ದೆ- 2012 ಹಾಗೂ ಭಾರತೀಯ ದಂಡ ಸಂಹಿತೆಯ ನಿಯಮಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ರಾಹುಲ್ ಗಾಂಧಿ ಅವರ ಇನ್ಸ್ಟಾಗ್ರಾಮ ಖಾತೆ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು" ಎಂದು ಫೇಸ್ಬುಕ್ ಅನ್ನು ಒತ್ತಾಯಿಸಿದೆ.