ಶಿವಮೊಗ್ಗ, ಆ 13 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಸುಲಭ್ ಶೌಚಾಲಯಕ್ಕೆ ಇಡಿ ಎಂದು ಹರಿಪ್ರಸಾದ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡಿದರೆ ಯಾರಿಗೆ ಸಿಟ್ಟು ಬರಲ್ಲ? ಈ ಕಾರಣಕ್ಕೆ ನಾನು ಹಾಗೆ ಮಾತನಾಡಿದ್ದು" ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಡೀ ಪ್ರಪಂಚದ ನಾಯಕರ ಪೈಕಿ ನರೇಂದ್ರ ಮೋದಿ ಅವರು ಕೂಡಾ ಒಬ್ಬರಾಗಿದ್ದಾರೆ. ನಮಗೆ ಅವರ ಮೇಲೆ ಗೌರವವಿದೆ. ದೇಶದಲ್ಲಿ ಭಾರತೀಯರಿಗೆ ಸಿಗುವ ಗೌರವ ಇಂದು ಬದಲಾಗಿದೆ. ಇಂದು ಎಲ್ಲಾ ದೇಶಗಳು ಭಾರತದ ಜೊತೆಗಿದ್ದು, ಪಾಕಿಸ್ತಾನ ಒಂಟಿಯಾಗಿದೆ" ಎಂದಿದ್ದಾರೆ.
"ಕೊನೆಗೆ ತಪ್ಪಿನ ಅರಿವಾಗಿ ವಿತ್ ಡ್ರಾ ಮಾಡಿಕೊಂಡೆ. ಇದರ ಜೊತೆ ಪದಬಳಕೆ ಮಾಡಿದ್ದಕ್ಕೂ ಕ್ಷಮೆ ಕೇಳಿದೆ. ನನ್ನ ವಿರುದ್ದ ಹೋರಾಟ, ಪ್ರತಿಭಟನೆ ಮಾಡುತ್ತೇನೆಂದವರು ಬೇಕಾದರೆ ಪ್ರತಿಭಟನೆ, ಹೋರಾಟ ಮಾಡಲಿ. ನಾನು ಬೇಡ ಎಂದು ಹೇಳುವುದಿಲ್ಲ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷವನ್ನು ನಾನು ಟೀಕೆ ಮಾಡಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಮಾತ್ರ ಹೇಳಿದ್ದೇನೆ. ಆ ನಾಯಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಏನು ಕ್ರಮ ತೆಗೆದುಕೊಳ್ಳುತ್ತಾರೆ?" ಎಂದು ಕೇಳಿದ್ದಾರೆ.
"ಪ್ರಧಾನಿ ಮೋದಿ ಅವರ, ನರೇಗಾ ಯೋಜನೆಯಡಿ ಜಲಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಕಳೆದ ಮಾರ್ಚ್ನಲ್ಲಿ ಕ್ಯಾಚ್ದ ರೇನ್ ಅಭಿಯಾನವನ್ನು ಕೂಡಾ ಪ್ರಾರಂಭಿಸಲಾಗಿತ್ತು. ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನ ಗಳಿಸಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆಗಳು. ರಾಜ್ಯ ಮುಂದಿನ ವರ್ಷ ಕೂಡಾ ಮೊದಲ ಸ್ಥಾನದಲ್ಲೇ ಇರುವಂತಹ ಕಾರ್ಯ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.