ಬೆಂಗಳೂರು, ಆ 13 (DaijiworldNews/PY): "ಸಿಎಂ ಅವರ ನಿರ್ಧಾರದಂತೆ ರಾಜ್ಯದಲ್ಲಿ ಆ. 23 ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಭೌತಿಕ ತರಗತಿಗಳನ್ನು ಆರಂಭಿಸಲಾಗುವುದು. ಈಗಾಗಲೇ ತೆಗೆದುಕೊಂಡ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
"ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಶಾಲೆಗಳನ್ನು ತೆರೆದಿಲ್ಲ. ಭೌತಿಕ ತರಗತಿಗಳನ್ನು ತೆರೆಯುವ ಕುರಿತು ಈಗಾಗಲೇ ಪೋಷಕರು ಹಾಗೂ ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿಯ ಸದ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ವರದಿ ನೀಡಿದೆ. ಅಲ್ಲದೇ, ಅನೇಕ ತಜ್ಞ ವೈದ್ಯರ ಸಮಿತಿಗಳು ನೀಡಿರುವ ವರದಿಗಳನ್ನು ಸಿಎಂ ಅವರ ಗಮನಕ್ಕೆ ತಂದು ಚರ್ಚಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಈ ಬಗ್ಗೆ ಇಂದು ಅಥವಾ ನಾಳೆ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗುವುದು. ಮೊದಲ ಹಂತದಲ್ಲಿ ರಾಜ್ಯದಲ್ಲಿ ಪ್ರೌಢ ಶಿಕ್ಷಣ ಭೌತಿಕ ತರಗತಿಗಳನ್ನು ಆರಂಭಿಸಲಾಗುವುದು. ಪ್ರಾಥಮಿಕ ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಭೌತಿಕ ತರಗತಿಗಳನ್ನು ಆರಂಭಿಸಲು ಸೂಚನೆ ನೀಡಲಾಗುವುದು. ಎಲ್ಲಾ ಶಾಲೆಗಳು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು" ಎಂದು ಹೇಳಿದ್ದಾರೆ.
"ಶಿಕ್ಷಕರನ್ನು ಕೊರೊನಾ ವಾರಿಯರ್ಸ್ಗಳು ಎಂದು ಪರಿಗಣಿಸಿ ಹೆಚ್ಚಿನ ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆ ಸೆ. 1ರಿಂದ 1ನೇ ತರಗತಿಯಿಂದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಲು ಈಗಾಗಲೇ ನಿರ್ಧರಿಸಿದ್ದೇವೆ. ಇದರ ರೀತಿ ಶಾಲೆಯನ್ನು ತೆರೆಯಲು ತೀರ್ಮಾನ ಮಾಡಿದ್ದೇವೆ. ಈ ವಿಚಾರವಾಗಿ ಸಿಎಂ ಅವರೊಂದಿಗೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ಸಿಎಂ ಹಾಗೂ ತಜ್ಞರ ಸಲಹೆಯ ಆಧಾರದ ಮೇಲೆ ಸೆ.1ರಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ" ಎಂದಿದ್ದಾರೆ.
"ಕೇರಳ ಸೇರಿ ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 168 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಗಳು ಬಂದಿವೆ. ಈ ಮಧ್ಯೆ, ರಾಜ್ಯದಲ್ಲಿ ಮತ್ತೆ ಶಾಲಾರಂಭದ ಬಗ್ಗೆ ಗೊಂದಲ ಏರ್ಪಟ್ಟಿದೆ. ಕೊರೊನಾ ಮೂರನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಹಾಗಾಗಿ ಮತ್ತೆ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರ ದ ತೀರ್ಮಾನದಲ್ಲಿ ಬದಲಾವಣೆ ಆಗಲೂಬಹುದು. ಸದ್ಯದ ನಿರ್ಧಾರದಂತೆ ರಾಜ್ಯದಲ್ಲಿ ಸೆ.1ರಿಂದ ಪ್ರಾಥಮಿಕ ಶಾಲೆ ಆರಂಭಿಸಲು ನಿರ್ಧರಿಸಿದ್ದೇವೆ" ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, "ರಾಜ್ಯದಲ್ಲಿ ಪ್ರೌಢ ಶಾಲೆಯ ಭೌತಿಕ ತರಗತಿಗಳನ್ನು ತೆರೆಯುವ ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ. ಈಗಾಗಲೇ ತಜ್ಞರ ಸಮಿತಿಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ವರದಿ ನೀಡಿ, ಶಾಲೆ ತೆರೆಯಲು ಶಿಫಾರಸು ಮಾಡಲಾಗಿದೆ. ಕೇವಲ ಪ್ರೌಢ ಶಾಲೆ ಮಾತ್ರವಲ್ಲದೇ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸುತ್ತೇನೆ" ಎಂದು ತಿಳಿಸಿದ್ದಾರೆ.