ಬೆಂಗಳೂರು, ಆ.13 (DaijiworldNews/HR): ಕರ್ನಾಟಕದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಬೆಳಗ್ಗೆ ನಗರದ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರಕ್ಷಾ ರಾಮಯ್ಯ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಗಿದೆ.
ಇನ್ನು ರಕ್ಷಾ ರಾಮಯ್ಯ ಅವರು ಜನವರಿ 31ರ ವರೆಗೆ ರಾಜ್ಯದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಆ ಬಳಿಕ ಮೊಹಮ್ಮದ್ ನಲಪಾಡ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಮತ್ತು ಮೊಹ್ಮದ್ ನಲಪಾಡ್ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಚುನಾವಣೆಯಲ್ಲಿ ನಲಪಾಡ್ ಹೆಚ್ಚು ಮತಗಳನ್ನು ಗಳಿಸಿದ್ದರೂ, ಅವರ ಮೇಲೆ ಹಲವು ಅಪರಾಧ ಪ್ರಕರಣಗಳಿರುವುದರಿಂದ ರಕ್ಷಾ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಗಿತ್ತು. ಈ ಮಧ್ಯೆ, ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪಕ್ಷದ ಹಿರಿಯ ನಾಯಕರಿಗೆ ರಕ್ಷಾ ದೂರು ನೀಡಿದ್ದರು. ಇತ್ತೀಚೆಗೆ ನಡೆದ ‘ಸಂಧಾನ’ ದಂತೆ ಮುಂದಿನ ಜನವರಿ 31ರ ವರೆಗೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಮುಂದುವರಿಯಲಿದ್ದು ಆ ಬಳಿಕ ಸ್ಥಾನವನ್ನು ನಲಪಾಡ್ ಅವರಿಗೆ ಬಿಟ್ಟು ಕೊಡಬೇಕಿದೆ.