ಬೆಂಗಳೂರು, ಆ 13 (DaijiworldNews/PY): "ಕ್ಷೇತ್ರದ ಅನುದಾನಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಅನುದಾನ ನೀಡುತ್ತೇನೆ ಎಂದು ಸಿಎಂ ಅವರು ಹೇಳಿದ್ದಾರೆ. ಅನುದಾನ ಕೊಡಲಿಲ್ಲ ಎಂದಲ್ಲಿ ನಾನು ನನ್ನ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಬಾರಿ ನನ್ನ ಕ್ಷೇತ್ರದಲ್ಲಿ ಪ್ರವಾಹವಾಗಿತ್ತು. ಪ್ರವಾಹದ ಪರಿಣಾಮ ಆರು ಮಂದಿ ಕೊಚ್ಚಿ ಹೋಗಿದ್ದರು. ಅಲ್ಲದೇ, ಮನೆಗಳಿಗೂ ಹಾನಿಯಾಗಿತ್ತು. ನನ್ನ ಮೇಲೆ ಕ್ಷೇತ್ರದ ಜನರು ದಂಗೆ ಏಳುತ್ತಾರೆ. ಸಿಎಂ ಹಾಗೂ ಕಂದಾಯ ಸಚಿವ ಆರ್ ಅಶೋಕ್ ನನ್ನ ಕ್ಷೇತ್ರಕ್ಕೆ ಬಂದಿದ್ದರು. ಅವರು ಬಂದಿದ್ದರೂ ಕೂಡಾ ಸಮಸ್ಯೆ ಬಗರ ಹರಿದಿಲ್ಲ ಎಂದಾದರೆ ಜನರು ಪ್ರಶ್ನೆ ಮಾಡುತ್ತಾರೆ" ಎಂದಿದ್ದಾರೆ.
"ನನಗೆ ಸೂಕ್ತವಾದ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ, ಈ ಬಾರಿಯೂ ಅನುದಾನ ಸಿಕ್ಕಲ್ಲ. ಈ ರೀತಿಯಾದರೆ ನಾನು ಬೇರೆ ರೀತಿ ಯೋಚನೆ ಮಾಡಬೇಕಾಗುತ್ತದೆ. ನಾನು ಬೇರೆ ರೀತಿ ಯೋಚನೆ ಮಾಡಿಯೇ ಮಾಡುತ್ತೇನೆ. ನನಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಾನು ಅಧಿಕಾರಕ್ಕೆ ಬಂದು ಸ್ಪಲ್ಪ ದಿನವಾಗಿದೆ. ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದಿದ್ದಾರೆ. ಇಂದು ಮೂರು ಗಂಟೆಗೆ ಭೇಟಿ ಮಾಡಲು ಸಿಎಂ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರ ಹುಟ್ಟುಹಬ್ಬವಿತ್ತು. ನಾನು ಪ್ರತಿವರ್ಷ ಅವರ ಹುಟ್ಟುಹಬ್ಬದಂದು ಶುಭಕೋರಲು ಹೋಗುತ್ತೇನೆ. ನನಗೆ ಸಿದ್ದರಾಮಯ್ಯ ಅವರೆಂದರೆ ತುಂಬಾ ಇಷ್ಟ. ಅಹಿಂದ ನಾಯಕ ಎಂದು ಇರುವುದು ಸಿದ್ದರಾಮಯ್ಯ ಅವರೊಬ್ಬರೇ" ಎಂದು ತಿಳಿಸಿದ್ದಾರೆ.
ಸಿ.ಟಿ ರವಿ ಹಾಗೂ ತಮ್ಮ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನಗೂ ಹಾಗೂ ಸಿ ಟಿ ರವಿ ಅವರಿಗೆ ಯಾವತ್ತಿಗೂ ಚೆನ್ನಾಗಿಲ್ಲ. ನಾನು ಮತದಾರರೊಂದಿಗೆ ಚೆನ್ನಾಗಿದ್ದೇನೆ. ನಾನೇನು ದೇವರಲ್ಲ. ನನ್ನ ನಾಯಕತ್ವ ಸಾಬೀತಾಗಿದೆ. ನಾಯಕತ್ವ ವಹಿಸಿದ ಯಾವುದೇ ಚುನಾವಣೆಗಳಲ್ಲಿ ನಾನು ಸೋತಿಲ್ಲ" ಎಂದು ಹೇಳಿದ್ದಾರೆ.