ನವದೆಹಲಿ, ಆ 13 (DaijiworldNews/PY): ತನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದು, "ಸಾಮಾಜಿಕ ಮಾಧ್ಯಮ ವೇದಿಕೆ ದೇಶದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದು ದೇಶ ಪ್ರಜಾಪ್ರಭುತ್ವದ ರಚನೆಯ ಮೇಲೆ ದಾಳಿ" ಮಾಡಿದೆ ಎಂದಿದ್ದಾರೆ.
ಈ ಬಗ್ಗೆ ವಿಡಿಯೋವೊಂದರಲ್ಲಿ ಹೇಳಿದ ಅವರು, "ಇದು ರಾಹುಲ್ ಗಾಂಧಿ ಮೇಲಿನ ದಾಳಿ ಅಲ್ಲ. ನಾನು19- 20 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದೇನೆ. ನೀವು ಅವರಿಗೆ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದ್ದೀರಿ. ಇದು ಕೇವಲ ಅನ್ಯಾಯವಲ್ಲ. ಟ್ವಿಟರ್ ಒಂದು ತಟಸ್ಥ ವೆದಿಕೆ ಎನ್ನುವ ಕಲ್ಪನೆಯನ್ನು ಉಲ್ಲಂಘಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
"ಟ್ವಿಟರ್ ಅನ್ನು ಲಾಕ್ ಮಾಡುವ ಮೂಲಕ ಟ್ವಿಟರ್ ಸಂಸ್ಥೆಯು ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ, ರಾಜಕೀಯ ವ್ಯಾಖ್ಯಾನಿಸಲು ಕಂಪೆನಿಯು ತನ್ನ ವ್ಯಾಪಾರವನ್ನು ಮಾಡುತ್ತಿದೆ. ರಾಜಕಾರಣಿಯಾಗಿ ಅದು ನನ್ನೆ ಇಷ್ಟವಿಲ್ಲ" ಎಂದಿದ್ದಾರೆ.
"ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ಸಂಸತ್ತಿನಲ್ಲಿ ನಮಗೆ ಮಾತನಾಡಲು ಅವಕಾಶವಿಲ್ಲ. ಮಾಧ್ಯಮಗಳು ಕೂಡಾ ನಿಯಂತ್ರಿಸಲ್ಪಟ್ಟಿವೆ. ಟ್ವಿಟರ್ ಪಕ್ಷಪಾತದ ವೇದಿಕೆಯಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಟ್ವಿಟರ್ ತನ್ನ ನಿಯಮಗಳನ್ನು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಜಾರಿಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪೋಷಕರ ಫೋಟೋ ಹಂಚಿಕೊಂಡಿದ್ದ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ರಾಹುಲ್ ಗಾಂಧಿ ಅವರ ಟ್ವಿಟರ್ ಲಾಕ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ನ ರಣದೀಪ್ ಸುರ್ಜೇವಾಲಾ ಸೇರಿದಂತೆ ಅಜಯ್ ಮಾಕೆನ್, ಸುಶ್ಮಿತಾ ದೇವ್ ಹಾಗೂ ಮಾಣಿಕಮ್ ಠಾಗೋರ್ ಅವರ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್ ಮಾಡಲಾಗಿದೆ.