ಶಿಮ್ಲಾ, ಆ.13 (DaijiworldNews/HR): ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇಂದು ಮಣ್ಣಿನಡಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ ಎಂದು ವಿಪತ್ತು ನಿರ್ವಹಣೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭೂ ಕುಸಿತದಲ್ಲಿ ಇನ್ನೂ 15 ಮಂದಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ರಕ್ಷಣಾ ಕಾರ್ಯಪಡೆಯವರು ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಇನ್ನು ರಕ್ಷಣಾ ಕಾರ್ಯಪಡೆಯವರು ಬುಧವಾರ ಬೆಳಿಗ್ಗೆ ನಡೆಸಿದ ಶೋಧಕಾರ್ಯದಲ್ಲಿ ಭೂ ಕುಸಿತದ ಸ್ಥಳದಿಂದ 10 ಮೃತದೇಹಗಳನ್ನು ಹೊರತೆಗೆದಿದ್ದು, ಗುರವಾರ ನಾಲ್ಕು ಶವಗಳು ಪತ್ತೆಯಾಗಿದ್ದು, ಬುಧವಾರದಂದು 13 ಜನರನ್ನು ರಕ್ಷಿಸಲಾಯಿತು.
ಭೂ ಕುಸಿತವಾದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಭಾರತ-ಟಿಬೆಟ್ ಗಡಿ ಪೋಲಿಸ್, ಸ್ಥಳೀಯ ಪೊಲೀಸ್ ಮತ್ತು ಹೋಮ್ ಗಾರ್ಡ್ ಸದಸ್ಯರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.