ಬೆಂಗಳೂರು, ಆ.13 (DaijiworldNews/HR): ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸಬೇಕಾ ಅಥವಾ ಬೇಡ ಎನ್ನುವುದನ್ನು ಸರ್ಕಾರದಿಂದ ಉಚಿತ ಅನ್ನ ಸ್ವೀಕರಿಸುವ ಜನರೇ ನಿರ್ಧರಿಸಲಿ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇಂದಿರಾ ಕ್ಯಾಂಟಿನ್ ಹೆಸರೇ ಇರಬೇಕಾ ಅಥವಾ ಅನ್ನಪೂರ್ಣೇಶ್ವರಿ ಹೆಸರು ಬೇಕಾ ಎನ್ನುವುದನ್ನು ಜನರ ಅಭಿಪ್ರಾಯ ಸಂಗ್ರಹ ಆಗಬೇಕು ಯಾವ ಹೆಸರಿಟ್ಟರೆ ಉಚಿತ ಅನ್ನ ಆಹಾರ ಸ್ವೀಕರಿಸಲು ಒಳ್ಳೆಯದು ಎನ್ನುವ ಬಗ್ಗೆ ಜನಾಭಿಪ್ರಾಯ ಸಂಗ್ರಹವಾಗಲಿ" ಎಂದರು.
ಇನ್ನು "ಬಿಜೆಪಿಗೆ ಕಾಂಗ್ರೆಸ್ ಏನೂ ಸಂಸ್ಕೃತಿ ಕಲಿಸಿಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಸಂಸ್ಕೃತಿ ಏನು ಎನ್ನುವುದು ನಮಗೆಲ್ಲ ಗೊತ್ತಿದೆ. ಹಿಂದೆ ವಾಜಪೇಯಿ ಚತುಷ್ಪಥ ರಸ್ತೆ ನಿರ್ಮಾಣ ಆದಾಗ ಇದೇ ಕಾಂಗ್ರೆಸ್ ದೇಶಾದ್ಯಂತ ಹೆಸರು ಬದಲಾಯಿಸಲು ಹೊರಟಿದ್ದರು. ವಾಜಪೇಯಿ ಚತುಷ್ಪಥ ರಸ್ತೆಯ ಬೋರ್ಡ್ ಬದಲಾಯಿಸುವುದಕ್ಕಾಗಿಯೇ ಹೆಚ್ಚಿನ ಹಣ ಬಿಡುಗಡೆ ಮಾಡಿದ್ದರು. ಹೀಗಾಗಿ ಅವರಿಂದ ನಾವೇನು ಕಲಿಬೇಕಾಗಿಲ್ಲ" ಎಂದು ಹೇಳಿದ್ದಾರೆ.