ಹೈದರಾಬಾದ್, ಆ 13 (DaijiworldNews/PY): ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಮೊಮ್ಮಗ ತನ್ನ 93 ವರ್ಷದ ಅಜ್ಜನ ಮೃತದೇಹವನ್ನು ಫ್ರಿಡ್ಜ್ನಲ್ಲಿರಿಸಿದ ಘಟನೆ ತೆಲಂಗಾಣ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ನೆಹೊರೆಯವರು ದುರ್ವಾಸನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ವಾರಂಗಲ್ನ ಪರ್ಕಳದಲ್ಲಿರುವ ಮನೆಯಲ್ಲಿ ಶೋಧ ನಡೆಸಿದ್ದು, ಈ ವೇಳೆ ಫಿಡ್ಜ್ನಲ್ಲಿ ಕೊಳೆತ ದೇಹ ಪತ್ತೆಯಾಗಿದೆ. ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ವೃದ್ದ ತನ್ನ ಮೊಮ್ಮಗ ನಿಖಿಲ್ ಜೊತೆ ಬಾಡಿಗೆಗೆ ಈ ಮನೆಯಲ್ಲಿ ವಾಸವಿದ್ದರು. ವೃದ್ದನಿಗೆ ಬರುವ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದರು.
"ಇತ್ತೀಚೆಗೆ ಅಜ್ಜ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದರು. ಆದರೆ, ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ, ಅಜ್ಜನ ಮೃತದೇಹವನ್ನು ಫ್ರಿಡ್ಜ್ನಲ್ಲಿ ಇರಿಸಿದ್ದೆ" ಎಂದು ನಿಖಿಲ್ ಪೊಲೀಸರಿಗೆ ತಿಳಿಸಿದ್ದಾನೆ.
ಅಜ್ಜನ ಪಿಂಚಣಿ ಹಣ ನಿಲ್ಲಬಾರದು ಎನ್ನುವ ಕಾರಣದಿಂದ ಮೊಮ್ಮಗ ನಿಖಿಲ್ ಈ ಕೃತ್ಯ ನಡೆಸಿದ್ದಾನೆಯೇ ಎನ್ನುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.