ಬೆಂಗಳೂರು, ಆ.13 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಅವರದ್ದು ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅನುಪಸ್ಥಿತಿಯಲ್ಲಿ ಎಸ್ಐಟಿ ನಡೆಸಿರುವ ತನಿಖೆಯನ್ನು ತಾನು ಮರು ಪರಿಶೀಲಿಸುವ ಅಗತ್ಯವಿಲ್ಲ ಎಂದು ಎಸ್ಐಟಿ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಹಾಗೂ ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಇನ್ನು ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಪ್ರಕರಣದ ವಿಚಾರಣೆ ನಡೆದಿರುವುದಕ್ಕೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ಸುದೀರ್ಘ 3 ತಿಂಗಳ ಕಾಲ ಎಸ್ಐಟಿ ಮುಖ್ಯಸ್ಥರು ರಜೆಯಲ್ಲಿದ್ದು, ಅವರು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರಿಗೂ ವಹಿಸಿರಲಿಲ್ಲ. ಈ ರೀತಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಯಬಹುದೇ? ನಡೆದರೂ ಆ ವರದಿಯನ್ನು ಸಮರ್ಪಕವಾಗುತ್ತದೆಯೇ? ಎಂದು ಪ್ರಶ್ನಿಸಿದ್ದು, ತಮ್ಮ ಅನುಪಸ್ಥಿತಿಯಲ್ಲಿ ನಡೆದ ಈವರೆಗಿನ ತನಿಖಾ ವರದಿಯನ್ನು ಪರಿಶೀಲಿಸುತ್ತಾರೆಯೇ ಎಂಬ ಬಗ್ಗೆ ಸೌಮೇಂದು ಮುಖರ್ಜಿಯವರ ನಿಲುವು ಕೇಳಿ ತಿಳಿಸುವಂತೆ ಎಸ್ಐಟಿ ಪರ ವಕೀಲರನ್ನು ನ್ಯಾಯಪೀಠ ಹೇಳಿತ್ತು.
"ನಾನು ಸೌಮೇಂದು ಮುಖರ್ಜಿ ಯವರೊಂದಿಗೆ ಮಾತನಾಡಿದ್ದೇವೆ, ವರದಿಯನ್ನು ತಾನು ಪರಿಶೀಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಈ ಹಿಂದೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿನ ಹೇಳಿಕೆಗೆ ಈಗಲೂ ಬದ್ಧವಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ" ಎಂದು ಎಸ್ಐಟಿ ಪರ ವಕೀಲ ಪಿ. ಪ್ರಸನ್ನ ಕುಮಾರ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.