ಹುಬ್ಬಳ್ಳಿ, ಆ 13 (DaijiworldNews/PY): "ಆಡಳಿತದಲ್ಲಿ ಈಗಲೂ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೆರಳು ಆಗುವುದಿಲ್ಲ ಎನ್ನುವ ನಂಬಿಕೆ ಇದೆ. ಅವರು ನೆರಳಾಗಿದ್ದರೆ ಯಡಿಯೂರಪ್ಪ ಅವರು ನೇಮಕ ಮಾಡಿ ಸಿಬ್ಬಂದಿಯೇ ಮುಂದುವರಿಯುತ್ತಿದ್ದರು. ಆದರೆ, ಆಡಳಿತದಲ್ಲಿಈಗಲೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ" ಎಂದಿದ್ದಾರೆ.
"ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಂತರ ಬಿಎಸ್ವೈ ಅವರ ಒತ್ತಡದಿಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸಲಿ ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುತ್ತೇನೆ. ಸಿಎಂ ಅವರಿಗೆ ಮೂರ್ನಾಲ್ಕು ತಿಂಗಳ ಕಾಲಾವಕಾಶ ನೀಡಬೇಕು. ಬಳಿಕ ಅವರ ಆಡಳಿತ ನಿರ್ವಹಣೆಯ ಕುರಿತು ವ್ಯಾಖ್ಯಾನಿಸಬಹುದು" ಎಂದು ಹೇಳಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರು, ಜಗದೀಶ್ ಶೆಟ್ಟರ್ ಅವರ ತ್ಯಾಗದ ಪ್ರತಿರೂಪವಾಗಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾವೇರಿ ನಿವಾಸದಲ್ಲಿನ ಕೆಲ ದೃಶ್ಯಗಳ ಕುರಿತು ಮಾಹಿತಿ ಇದೆ. ಇನ್ನೊಂದು ವಾರ ತಡೆಯಿರಿ ಎಲ್ಲವನ್ನೂ ತಿಳಿಸುತ್ತೇನೆ" ಎಂದಿದ್ದಾರೆ.