ಬೆಂಗಳೂರು, ಆ 13 (DaijiworldNews/MS): ನೆಹರೂ ಹೆಸರಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂಬ ಬಿಜೆಪಿ ಮುಖಂಡ ಸಿ.ಟಿ.ರವಿಯವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಿಟಿ ರವಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, ಆದರೆ ಅವರ ಹೇಳಿಕೆಗಳು ಅವರ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಮ್ಮ ದೇಶಕ್ಕಾಗಿ ನೆಹರು ಕುಟುಂಬವು ನೀಡಿದ ಸೇವೆ, ತ್ಯಾಗ ಮತ್ತು ಅಭಿವೃದ್ಧಿ ಮುಂತಾದವುಗಳನ್ನು ಬಿಜೆಪಿಗೆ ಹೋಲಿಕೆ ಮಾಡಲು ಅಸಾಧ್ಯ ಎಂದು ಹೇಳಿದರು.
ನೆಹರು ಕುಟುಂಬದ ತ್ಯಾಗವನ್ನು ಬಿಜೆಪಿಯಲ್ಲಿ ಯಾರಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ.ಬಿಜೆಪಿಯಲ್ಲಿ ನೆಹರು ಕುಟುಂಬದಷ್ಟು ದೊಡ್ಡ ತ್ಯಾಗ ಮಾಡಿದವರು ಯಾರೂ ಇಲ್ಲ. ನೆಹರು ಕುಟುಂಬದ ಆಸ್ತಿಯನ್ನು ದಾನ ಮಾಡಿದ್ದಾರೆ. ಇದೆಲ್ಲಾ ಸಿ.ಟಿ.ರವಿಗೆ ಗೊತ್ತಿಲ್ಲ ಕಾಣುತ್ತದೆ ಎಂದು ಕಿಡಿಕಾರಿದರು.
ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಟಿ ರವಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಯಾರಿಗೆ ಯಾವುದೋ ಪ್ರಿಯವೋ ಅದೇ ನೆನಪಾಗುತ್ತೆ. ನಮಗೆ ಬಡವರನ್ನು ಕಂಡಾಗ ತಿನ್ನುವ ಅನ್ನ ನೆನಪಾಗಿ ಇಂದಿರಾ ಕ್ಯಾಂಟೀನ್ ತೆರೆದಿದ್ದೇವೆ . ಸಿ.ಟಿ. ರವಿ ಅವರಿಗೆ, ಅವರ ಆಸಕ್ತಿ-ಸಂಸ್ಕೃತಿಗೆ ತಕ್ಕ ಹಾಗೆ ಬಾರ್ - ಹುಕ್ಕಾಬಾರ್ ನೆನಪಾಗಿದೆ ಹೀಗಾಗಿ ಏನೇನೋ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.