ಬೆಂಗಳೂರು, ಆ 12 (DaijiworldNews/PY): ಕಾಂಗ್ರೆಸ್ಸಿಗರು ಕಾಂಗ್ರೆಸ್ ಕಚೇರಿಯಲ್ಲಿ ನೆಹರು ಹುಕ್ಕಾ ಬಾರ್ ತೆರೆಯಲಿ ಎಂದು ಹೇಳಿದ್ದ ಸಿ ಟಿ ರವಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, "ಸಿ ಟಿ ರವಿ ಅವರಿಗೆ ಇತಿಹಾಸದ ಬಗ್ಗೆ ತಿಳಿದಿಲ್ಲ. ಗುಜರಾತ್ ಸ್ಟೇಡಿಯಂಗೆ ನರೇಂದ್ರ ಮೋಸಿ ಅವರ ಹೆಸರು ಏಕೆ ಇಟ್ಟಿದ್ದಾರೆ? ಅದಕ್ಕೆ ಏನೆಂದು ಕರೆಯುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
"ದೆಹಲಿಯಲ್ಲಿ ಅರುಣ್ ಜೇಟ್ಲಿ ಅವರ ಹೆಸರನ್ನು ಏಕೆ ಇಟ್ಟಿದ್ದಾರೆ?. ಯಶವತಪುರದ ಬಳಿ ದೀನ ದಯಾಳ ಉಪಾಧ್ಯಾಯ ಮೇಲ್ಸೇತುವೆಗೆ ಹೆಸರಿಟ್ಟಿದ್ದಾರೆ ಏಕೆ?. ವಾಜಪೇಯಿ ಹೆಸರು, ಸಾರ್ವಕರ್ ಹೆಸರು ಏಕೆ ಇಟ್ಟಿದ್ದು?. ಅವೆಲ್ಲಕ್ಕೂ ಬೇಕಾದರೆ ಹುಕ್ಕಾ ಬಾರ್ ಎಂದು ಹೆಸರಿಡಲಿ. ಆದರೆ, ಅವರ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ" ಎಂದಿದ್ದಾರೆ.
"ನೆಹರೂ ಅವರು ಈ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತವರು. ಅವರ ಇಡೀ ಕುಟುಂಬ ಬಲಿದಾನ ಮಾಡಿದೆ. ರಾಜೀವ್ ಗಾಂಧಿ ಏಕೆ ಸತ್ತರು?. ಇಂದಿರಾ ಗಾಂಧಿ ಏಕೆ ಸತ್ತರು? ಎಂದು ಸಿ ಟಿ ರವಿ ಹೇಳಲಿ. ಸಿ ಟಿ ರವಿಗೆ ಇತಿಹಾಸದ ಬಗ್ಗೆ ತಿಳಿದಿಲ್ಲ" ಎಂದು ತಿಳಿಸಿದ್ದಾರೆ.