ನವದೆಹಲಿ, ಆ 12 (DaijiworldNews/PY): "ಶಾಲೆಯಿಂದ ಹೊರಗುಳಿದಿರುವ ಸುಮಾರು 15 ಕೋಟಿ ಮಕ್ಕಳನ್ನು ಶಿಕ್ಷಣ ವ್ಯವಸ್ಥೆಗೆ ವಾಪಾಸ್ಸು ಕರೆ ತರಲು ಕೇಂದ್ರ ಸರ್ಕಾರ ಬಯಸುತ್ತಿದೆ" ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆ ಕುರಿತ ವಿಶೇಷ ವರ್ಚುವಲ್ ಸಮಾವೇಶದಲ್ಲಿ ಮಾತನಾಡಿದ ಅವರು, "ಶಾಲೆಗಳಲ್ಲಿ ಇಂದು 35 ಕೋಟಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಸುಮಾರು 15 ಕೋಟಿ ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಅವರೆಲ್ಲರನ್ನು ಮತ್ತೆ ಶಿಕ್ಷಣ ವ್ಯವಸ್ಥೆಗೆ ತರಲು ನಾವು ಬಯಸುತ್ತೇವೆ" ಎಂದಿದ್ದಾರೆ.
"ಇದೇ ಮೊದಲ ಬಾರಿಗೆ ಸರ್ಕಾರವು ಶಿಕ್ಷಣ ಹಾಗೂ ಕೌಶಲ್ಯ ಇಲಾಖೆಗಳನ್ನು ಸಂಯೋಜಿಸುವ ಮೂಲಕ ಉತ್ತಮ ಜೀವನೋಪಾಯಕ್ಕೆ ಹೊಸ ಆಯಾಮವನ್ನು ನೀಡಿದೆ" ಎಂದು ತಿಳಿಸಿದ್ದಾರೆ.