ಲಕ್ನೋ, ಆ 12 (DaijiworldNews/PY): ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಟ್ರಕ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
"ಲಕ್ನೋ ಕಡೆಗೆ ವೇಗದಿಂದ ಹೋಗುತ್ತಿದ್ದ ಕಾರು ಎದುರಿಗೆ ಬರುತ್ತಿದ್ದ ಟ್ರಕ್ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ಪರಿಣಾಮ ಕಾರು ಟ್ರಕ್ನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಐವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕ್ರೇನ್ ಮೂಲಕ, ಟ್ರಕ್ನ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಹಾಗೂ ದೇಹಗಳನ್ನು ಹೊರತೆಗೆಯಲಾಯಿತು" ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
"ಘಟನೆಯಲ್ಲಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಾಲನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ಬಾಲಕಿಯ ಆರೋಗ್ಯ ಸುಧಾರಿಸಿದ್ದು, ಆಕೆ ಚೇತರಿಸಿಕೊಂಡಿದ್ದಾಳೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.