ಸಾಗರ, ಆ 12 (DaijiworldNews/PY): "ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿರುವ ಕೆಲವರು ಇದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವ ಕ್ರಮ ಸೂಕ್ತವಲ್ಲ" ಎಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.
ತಾಲೂಕಿನ ಅರೆಹದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ಸರಿಯಲ್ಲ. ಸಚಿವರ ಖಾತೆಯಲ್ಲಿ ಸಣ್ಣದು, ದೊಡ್ಡದು ಎನ್ನುವ ಭಾವನೆ ಇರಬಾರದು. ನಾನು ಸಣ್ಣ ನೀರಾವರಿ ಸಚಿವನಾಗಿದ್ದ ಸಂದರ್ಭ, ಇದು ಮಹತ್ವವಿಲ್ಲದ ಖಾತೆ ಅಲ್ಲ. ಈ ಖಾತೆಯನ್ನು ಏಕೆ ಒಪ್ಪಿಕೊಂಡಿದ್ದೀರಿ ಎಂದು ಕೆಲವರು ನನ್ನನ್ನು ಪ್ರಶ್ನಿಸಿದ್ದರು. ಆದರೆ. ಈಗ ಈ ಖಾತೆಯೇ ಮಹತ್ವದಾಗಿದೆ" ಎಂದಿದ್ದಾರೆ.
"ರಾಜ್ಯದಲ್ಲಿ ಈ ಹಿಂದೆ ಬಸವಲಿಂಗಪ್ಪ ಅವರಿಗೆ ಶಿಕ್ಷೆ ರೂಪದಲ್ಲಿ ಪರಿಸರ ಖಾತೆ ನೀಡಲಾಗಿತ್ತು. ಆದರೆ, ಅವರು ಆ ಖಾತೆಯನ್ನು ಸವಾಲಾಗಿ ಸ್ವೀಕರಿಸಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಖಾತೆಯ ಮಹತ್ವವನ್ನು ಮನದಟ್ಟು ಮಾಡಿದರು. ಇದೇ ರೀತಿ ಸಚಿವರು ತಮಗೆ ದೊರೆತ ಖಾತೆಯನ್ನು ಸೂಕ್ತವಾಗಿ ನಿಭಾಯಿಸಬೇಕು. ಖಾತೆಯ ಬಗ್ಗೆ ಅಸಮಾಧಾನಗೊಳ್ಳಬಾರದು" ಎಂದು ತಿಳಿಸಿದ್ದಾರೆ.
"ಶಿವಮೊಗ್ಗ ಜಿಲ್ಲೆಯ ಇಬ್ಬರು ಹಿರಿಯ ಸಚಿವರಿಗೆ ಸಚಿವ ಸ್ಥಾನ ನೀಡಿದ ಕಾರಣ ನನಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಪಕ್ಷದ ಹಿರಿಯರ ನಿರ್ಧಾರಕ್ಕೆ ನಾನು ಬದ್ಧ. ಮುಂದೆ ವಿಧಾನಸಭೆ ಚುನಾವಣೆ ಬರುವ ತನಕ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವನ್ನು ಸುಭದ್ರವಾಗಿ ನೋಡಿಕೊಳ್ಳುವುದು ಶಾಸಕರಾದ ನಮ್ಮೆಲ್ಲರ ಕರ್ತವ್ಯ" ಎಂದು ಹೇಳಿದ್ದಾರೆ.