ಮೈಸೂರು, ಆ 12 (DaijiworldNews/PY): "ಅಧಿಕಾರಕ್ಕೆ ಬಂದ ತಕ್ಷಣವೇ ಜಾತಿಗಣತಿ ವರದಿ ಪಡೆದು ಚರ್ಚೆಗೆ ಇಡುವೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಅಧಿಕಾರದಲ್ಲಿದ್ದ ಸಂದರ್ಭ ಜಾತಿ ಗಣತಿ ಮಾಡಿಸಿದ್ದೆ. ಬಳಿಕ ಬಂದ ಸರ್ಕಾರಗಳು ಗಣತಿ ವರದಿ ಪಡೆಯಲಿಲ್ಲ. ಯಾವ ಜಾತಿಯ ಸಮಾಜ ಬಡತನದಲ್ಲಿದೆ ಎಂದು ತಿಳಿದಿಲ್ಲ. ಎಲ್ಲಾ ಹಂತಗಳಲ್ಲಿ ಮೀಸಲಾತಿ ವಿರೋಧಿಸಿದ ಬಿಜೆಪಿ ಹಿಂದುಳಿದ ವರ್ಗಗಳ ಪರವಾಗಿಲ್ಲ" ಎಂದಿದ್ದಾರೆ.
"ಸರ್ಕಾರಕ್ಕೆ ಬದ್ಧತೆ ಇದ್ದಲ್ಲಿ ಕೇಂದ್ರ ಜಲನ್ಯಾಯ ಮಂಡಳಿಯ ಅನುಮತಿ ಪಡೆದು ಮೊದಲು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಿ. ಈ ಬಗ್ಗೆ ತಮಿಳುನಾಡಿಗೆ ಪತ್ರ ಬರೆದು ಅನುಮತಿ ಕೇಳುತ್ತೇನೆ ಎಂದು ಹೇಳುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
"ನನಗೀಗ 75 ವರ್ಷ ವಯಸ್ಸಾಗಿದೆ. ನನಗೆ ರಾಜಕೀಯದಲ್ಲಿ ಮುಂದುವರಿಯುವ ಆಸೆ ಇದೆ. ರಾಜಕೀಯದಲ್ಲಿ ಮುಂದುವರಿಯಲು ಉತ್ತಮ ಆರೋಗ್ಯ ಹಾಗೂ ಕೆಲಸ ಮಾಡುವ ಉತ್ಸಾಹ ಮುಖ್ಯ. ವಯಸ್ಸಲ್ಲ" ಎಂದಿದ್ದಾರೆ.
"ಸಿಗರೇಟ್ ಸೇದುತ್ತಿದ್ದ ಕಾರಣ ತೊಂದರೆಯಾಗಿ ಹೃದಯನಾಳದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಮಧುಮೇಹವಿದ್ದರೂ ಎಚ್ಚರ ವಹಿಸಿದ್ದ ಕಾರಣ ಗಂಭೀರವಾದ ಕಾಯಿಕೆಗಳಿಲ್ಲದೇ ಗಟ್ಟಿಮುಟ್ಟಾಗಿದ್ದೇನೆ" ಎಂದು ತಿಳಿಸಿದ್ದಾರೆ.
"ನನ್ನ ಜನ್ಮದಿನಾಂಕವೇ ತಪ್ಪಾಗಿ ನಮೂದಿಸಲಾಗಿದೆ. ಶಾಲೆಯ ದಾಖಲಾತಿಯಲ್ಲಿ 3-8-194 ಎಂದು ಇದೆ. ಆದರೆ, ಇದು ತಪ್ಪಾಗಿ 12–8–1947 ಎಂದಾಗಿದೆ" ಎಂದು ಹೇಳಿದ್ದಾರೆ.