ಶ್ರೀನಗರ, ಆ 12 (DaijiworldNews/PY): "ಕೇಂದ್ರಾಡಳಿತ ಪ್ರದೇಶದಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆಗಳು ದೊಡ್ಡ ಪ್ರಮಾಣದಲ್ಲಿ ದುಷ್ಕೃತ್ಯ ನಡೆಸಲು ಯತ್ನಿಸುತ್ತಿವೆ" ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನಿ ಉಗ್ರ ಸಂಘಟನೆಗಳು ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಪ್ರಯತ್ನಿಸುತ್ತಿವೆ ಎನ್ನುವ ಮಾಹಿತಿ ದೊರೆತಿದೆ. ಈ ಬಗ್ಗೆ ನಮ್ಮ ಪಡೆಗಳು ಎಚ್ಚರವಾಗಿದ್ದು, ರಕ್ಷಣಾ ಪಡೆ ಸೇರಿದಂತೆ ಪೊಲೀಸರು ಹಾಗೂ ಗುಪ್ತಚರ ಏಜೆನ್ಸಿ ಜೊತೆ ಸಂಪರ್ಕದಲ್ಲಿದ್ದಾರೆ. ನಾವು ಅಂತಹ ಯಾವುದೇ ರೀತಿಯಾದ ದುಷ್ಕೃತ್ಯಗಳನ್ನು ಹಿಮ್ಮೆಟ್ಟಿಸುತ್ತೇವೆ ಎನ್ನುವ ಭರವಸೆ ಇದೆ" ಎಂದಿದ್ದಾರೆ.
ಭಾರತೀಯ ಸೇನೆ ಹಾಗೂ ಕಾಶ್ಮೀರ ಪೊಲೀಸರು ಬುಧವಾರ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ನಲ್ಲಿನ ತರ್ಬಲ್ ಹಳ್ಳಿಯಲ್ಲಿ ಜಂಟಿ ಶೋಧ ಕಾರ್ಯಚರಣೆ ನಡೆಸಿದ್ದು, ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಂಡಿತ್ತು.
ತರ್ಬಲ್ನಲ್ಲಿ ಸಂಜೆ 6.30ಕ್ಕೆ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಕಾರ್ಯಾಚರಣೆ ಸಂದರ್ಭ 2 ಪಿಸ್ತೂಲ್ ಸೇರಿದಂತೆ ಹನ್ನೆರಡು ಎಕೆ-47 ಮ್ಯಾಗಜಿನ್ಗಳು, 16 ಗ್ರೆನೇಡ್ಗಳು, ಮೂರು ಎಕೆ-47 ಹಾಗೂ 4ಪಿಸ್ತೂಲ್ ಮ್ಯಾಗಜಿನ್ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅಲ್ಲದೇ, ಪಾಕ್ನ ದಿನಪತ್ರಿಕೆಯಾದ ದುನಿಯಾದ ಒಂಟು ಶೀಟ್ ಹಾಗೂ ಆ ದೇಶದಲ್ಲಿ ತಯಾರಾದ ತಿನಿಸುಗಳೂ ಸ್ಥಳದಲ್ಲಿ ಪತ್ತೆಯಾಗಿದ್ದವು.