ಬೆಂಗಳೂರು, ಆ 12 (DaijiworldNews/PY): ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಬುಧವಾರ ತಡರಾತ್ರಿ ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಅನ್ನು ಸುಟ್ಟು ಹಾಕಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಕಂಡುಬಂದಿದೆ.
ಶಾಸಕ ಸತೀಶ್ ರೆಡ್ಡಿ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, "ದುಷ್ಕರ್ಮಿಗಳು ತಡರಾತ್ರಿ 1.23ರ ಸುಮಾರಿಗೆ ಬಂದಿದ್ದು, ಎರಡು ಗಾಡಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಮಗೆ 1.30ರ ಸುಮಾರಿಗೆ ಘಟನೆ ಬಗ್ಗೆ ತಿಳಿಯಿತು. ಬ್ಯಾಟರಿ ಸ್ಪೋಟಗೊಂಡ ಸದ್ದಿಗೆ ನಮಗೆ ಎಚ್ಚರವಾಯಿತು. ಈ ವೇಳೆ ಗೇಟ್ ಬಳಿ ಇದ್ದ ಪೊಲೀಸ್ ಹಾಗೂ ವಾಚ್ಮ್ಯಾನ್ ಓಡಿ ಬಂದರು. ಬಳಿಕ ಬೆಂಕಿ ಆರಿಸಲಾಯಿತು" ಎಂದಿದ್ದಾರೆ.
"ಮನೆಯ ಹಿಂಬದಿ ಗೇಟ್ನಿಂದ ದುಷ್ಕರ್ಮಿಗಳು ಒಳ ನುಗ್ಗಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ" ಎಂದು ಆಗ್ನೇಯ ವಿಭಾಗ ಡಿಸಿಪಿ ಜೋಶಿ ಶ್ರೀನಾಥ್ ಮಹದೇವ್ ಮಾಹಿತಿ ನೀಡಿದ್ದಾರೆ.