ನವದೆಹಲಿ, ಆ 12 (DaijiworldNews/MS): ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸ್ಪೇಸ್ಪೋರ್ಟ್ನಿಂದ ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ISRO) ಭೂಮಿಯ ಅವಲೋಕನ ಉಪಗ್ರಹ ಜಿಎಸ್ಎಲ್ವಿ- ಎಫ್ 10 (GSLV-F10) ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.
ಇಒಎಸ್-3 ಉಪಗ್ರಹ ಇಂದು ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಿತ್ತು. ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರೂ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ತಲುಪಿಸಲು ವಿಫಲಗೊಂಡಿದೆ. ಕ್ರಯೋಜನಿಕ್ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದೆ ವೈಫಲ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಉಪಗ್ರಹ 2020ರ ಮಾರ್ಚ್ನಲ್ಲಿ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು.
ಬೆಳಗ್ಗೆ ನಿಗದಿಯಂತೆ 5:43ಕ್ಕೆ ಜಿಯೋ ಸಿಂಕ್ರೋನಸ್ ಸೆಟಿಲೈಟ್ ಲಾಂಚ್ ವೆಹಿಕಲ್ ತಂತ್ರಜ್ಞಾನದ 51.70 ಮೀಟರ್ ಎತ್ತರದ ಎಫ್10 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಅದಾದ ಬಳಿಕ ಮೊದಲ ಹಾಗೂ ಎರಡನೇ ಹಂತವೂ ಯಶಸ್ವಿಯಾಗಿ ನಡೆಯಿತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರಯೋಜೆನಿಕ್ ಎಂಜಿನ್ನ ಮೇಲಿನ ಮಟ್ಟದಲ್ಲಿ ನಿಶ್ಚಿತ ರೀತಿಯಲ್ಲಿ ಕಿಡಿ (ignition) ಉರಿಯಲಿಲ್ಲ. ಹೀಗಾಗಿ, ಸೆಟಿಲೈಟನ್ನು ನಿಗದಿತ ಕಕ್ಷೆಗೆ ಸೇರಿಸಲು ರಾಕೆಟ್ ವಿಫಲಗೊಂಡಿತೆನ್ನಲಾಗಿದೆ.