ನವದೆಹಲಿ, ಆ.11 (DaijiworldNews/HR): ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 27ರಂದು ನಡೆಸುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ.
ದೆಹಲಿಯ ಓಲ್ಡ್ ನಂಗಲ್ ಪ್ರದೇಶದಲ್ಲಿ ಆಗಸ್ಟ್ 1 ರಂದು ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಕುಟುಂಬದವರು ದೂರಿದ್ದರು. ಈ ಸಂಬಂಧ ರಾಹುಲ್ ಗಾಂಧಿ ಅವರು ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಟ್ವೀಟ್ ಮಾಡಿದ್ದರು.
ಇನ್ನು ಈ ಸಂಬಂಧ ಮಕರಂದ್ ಸುರೇಶ್ ಮಡ್ಲೇಕರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರ ಜೊತೆಗಿನ ಫೋಟೊವನ್ನು ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಕಾನೂನು ಉಲ್ಲಂಘಿಸಿದ್ದು, ಈ ಪ್ರಕರಣದಿಂದ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗವು ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು" ಎಂದು ಹೇಳಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಅವರ ಪೀಠವು, ಈ ಹಂತದಲ್ಲಿ ನೋಟಿಸ್ ಜಾರಿ ಮಾಡಲು ಸಾಧ್ಯವಿಲ್ಲ. ಮುಂದಿನ ವಿಚಾರಣೆ ವೇಳೆ ಎರಡೂ ಕಡೆಯವರು 1-2ರ ಪುಟಗಳ ವರದಿ ಸಲ್ಲಿಸುವಂತೆ ಸೂಚಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಅನ್ನು ಕೂಡ ತಾತ್ಕಲಿಕವಾಗಿ ಅಮಾನತುಗೊಳಿಸಲಾಗಿದೆ