ಶಿಮ್ಲಾ, ಆ 11 (DaijiworldNews/MS):ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ನೆಗುಲಸರಿಯಲ್ಲಿ ಬುಧವಾರ ಸಂಭವಿಸಿದ ಭಾರೀ ಭೂಕುಸಿತದ ಪರಿಣಾಮ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಎಚ್ಆರ್ಟಿಸಿ)ಯ ಬಸ್, ಟ್ರಕ್ ಮತ್ತು ಕಾರುಗಳು ಸೇರಿದಂತೆ ಐದು ವಾಹನಗಳು ಹಾಗೂ ಅದರಲ್ಲಿದ್ದ ಕನಿಷ್ಠ 35 ಜನರು ಮಣ್ಣಿನಡಿ ಸಿಲುಕಿರುವ ಸಂಶಯ ವ್ಯಕ್ತವಾಗಿದೆ.
"ಈ ಅವಘಡವು ರಾಜ್ಯ ರಾಜಧಾನಿ ಶಿಮ್ಲಾದಿಂದ 210 ಕಿಲೋಮೀಟರ್ ಮತ್ತು ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಜಿಲ್ಲಾ ಕೇಂದ್ರ ರೆಕಾಂಗ್ ಪಿಯೋದಿಂದ 60 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ" ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.
"ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಪೊಲೀಸ್ ಮತ್ತು ಸ್ಥಳೀಯ ಆಡಳಿತಕ್ಕೆ ನಾನು ಸೂಚಿಸಿದ್ದೇನೆ. ಅವಶೇಷದಡಿ ಸಿಲುಕಿರುವವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ಪಡೆಗೆ ಕೈಜೋಡಿಸಲು ವಿನಂತಿಸಿಕೊಂಡಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.
"ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೂಕುಸಿತದ ಬಗ್ಗೆ ನಮಗೆ ಮಾಹಿತಿ ಇದೆ. ನಾವು ಸ್ಥಳಕ್ಕೆ ಧಾವಿಸುತ್ತಿದ್ದೇವೆ. ಐಟಿಬಿಪಿ, ಪೊಲೀಸ್, ಗೃಹರಕ್ಷಕ ದಳ ಮತ್ತು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.