ಬೆಂಗಳೂರು, ಆ 11 (DaijiworldNews/MS): ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಾಸಕ ಜಮೀರ್ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿರುವ ವಿಚಾರವಾಗಿ ಬಿಜೆಪಿ ಪಕ್ಷವು ವ್ಯಂಗ್ಯವಾಡಿದ್ದು ಮಾರ್ಗದರ್ಶನ ಮಾಡುವುದಕ್ಕೆ ಶಾಸಕ ಜಮೀರ್ ಅವರೇನು ದೇಶದ ಗಡಿ ಕಾಯುವುದಕ್ಕೆ ಹೊರಟಿದ್ದಾರೆಯೇ!? ಎಂದು ಕೇಳಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಘಟಕ ತನ್ನ ಅಧಿಕೃತ ಖಾತೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, " ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವ ಕೆಪಿಸಿಸಿ ಭ್ರಷ್ಟಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಮಾರ್ಗದರ್ಶನ ಮಾಡುವುದಕ್ಕೆ ಐಎಂಎ ಜಮೀರ್ ಅವರೇನು ದೇಶದ ಗಡಿ ಕಾಯುವುದಕ್ಕೆ ಹೊರಟಿದ್ದಾರೆಯೇ!? ಕಪ್ಪು ಹಣ ಸಂಗ್ರಹ, ತೆರಿಗೆ ವಂಚನೆ ಪ್ರಕರಣದ ಆರೋಪಿಗೆ ಏನು ಮಾರ್ಗದರ್ಶನ ಮಾಡಿದ್ದೀರಿ? ಎಂದು ಪ್ರಶ್ನಿಸಿದೆ.
ಕೆಲದಿನಗಳ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ನಗರದ ಬಂಬೂಬಜಾರ್ ರಸ್ತೆಯಲ್ಲಿರುವ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಲಹೆ ನೀಡಿದ್ದಾರೆ.