ಬೆಂಗಳೂರು, ಆ.11 (DaijiworldNews/HR): ಸಚಿವ ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜೀನಾಮೆ ವಿಚಾರ ಯಾವುದೂ ಇಲ್ಲ" ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಆನಂದ್ ಸಿಂಗ್ ನನಗೆ ಮೂರು ದಶಕಗಳಿಂದ ಮಿತ್ರ, ಅವರ ವಿಚಾರಗಳನ್ನು ಅವರು ನನ್ನಲ್ಲಿ ಹೇಳಿದ್ದಾರೆ. ನಾನು ಅವರ ಮಾತನ್ನು ಕೇಳಿದ್ದೇನೆ. ರಾಜೀನಾಮೆಯ ಪ್ರಸ್ತಾಪವೇ ಇಲ್ಲ" ಎಂದಿದ್ದಾರೆ.
ಇನ್ನು "ಆನಂದ್ ಸಿಂಗ್ ನನ್ನನ್ನು ಸಂಪರ್ಕ ಮಾಡಿ ಮಾತನಾಡಿದ್ದು, ರಾಜೀನಾಮೆ ಕೊಡುವ ವಿಚಾರದ ಕುರಿತು ಮಾತನಾಡಿಲ್ಲ. ಮತ್ತೆ ಭೇಟಿಯಾಗಿ ಎಂದು ಹೇಳಿದ್ದೇನೆ. ಅವರೊಂದಿಗೆ ಮಾತುಕತೆ ನಡೆದ ನಂತರ ಎಲ್ಲವೂ ಸರಿಹೋಗುತ್ತದೆ" ಎಂದು ಹೇಳಿದ್ದಾರೆ.
"ಬಿಜೆಪಿಯಲ್ಲಿ ಯಾವುದೇ ರೀತಿಯಲ್ಲಿ ಗೊಂದಲವಿಲ್ಲ. ರಾಜೀನಾಮೆ ವಿಚಾರವಾಗಿ, ಖಾತೆಯ ವಿಚಾರವಾಗಿ ಪಕ್ಷ ಏನು ನಿರ್ಣಯ ತೆಗೆದುಕೊಂಡ ಮೇಲೆ ಎಲ್ಲವೂ ತಿಳಿಯುತ್ತದೆ. ನಾನು ಆ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ.