ಬೆಂಗಳೂರು, ಆ.11 (DaijiworldNews/HR): ಸಚಿವ ಆನಂದ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನೀಡಿರುವ ಸಚಿವ ಸ್ಥಾನದಿಂದ ಅಸಮಾಧಾನಗೊಂಡಿದ್ದು, ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಅವರಿಗೆ ಪರಿಸರ ಮತ್ತು ಜೀವವಿಜ್ಞಾನ ಹಾಗೂ ಪ್ರವಾಸೋದ್ಯಮ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಆದರೆ ನಿರೀಕ್ಷೆ ಮಾಡಿದ್ದಂತ ಖಾತೆಯೇ ಬೇರೆಯಾಗಿದ್ದು, ಸಿಎಂ ನೀಡಿದ್ದೇ ಬೇರೆ ಖಾತೆಯಾಗಿದ್ದರಿಂದಾಗಿ ಬೇಸರವಾಗಿದೆ ಎಂದು ಆನಂದ್ ಸಿಂಗ್ ಅವರೇ ಹೇಳಿದ್ದರು.
ಇನ್ನು ಸಚಿವ ಖಾತೆಯ ಅಸಮಾಧಾನದಿಂದಾಗಿ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಆನಂದ್ ಸಿಂಗ್ ಜೊತೆಗೆ ಮಾತನಾಡಿದ್ದೇನೆ. ಎಲ್ಲವನ್ನು ಅವರು ತಿಳಿಸಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆ ಹರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ಇನ್ನು ಸಚಿವ ಆನಂದ್ ಸಿಂಗ್ ಅವರ ಬಳ್ಳಾರಿಯ ಶಾಸಕರ ಕಚೇರಿಯ ಮುಂದೆ ಇದ್ದಂತ ಬೋರ್ಡ್ ಅನ್ನು ನಿನ್ನೆ ತೆರವುಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎನ್ನುವಂತ ಮಾತುಗಳು ಕೇಳಿ ಬರುತ್ತಿದೆ.