ಬೆಂಗಳೂರು, ಆ 11 (DaijiworldNews/MS): ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಾಸಕ ಜಮೀರ್ ಮನೆಗೆ ಭೇಟಿ ನೀಡಿ ಇಡಿ ದಾಳಿಯ ಮಾಹಿತಿ ಪಡೆದರು.
ಕೆಲದಿನಗಳ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ನಿವಾಸ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ನಗರದ ಬಂಬೂಬಜಾರ್ ರಸ್ತೆಯಲ್ಲಿರುವ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಹೋರಾಟದ ಬಗ್ಗೆ ಸಲಹೆ ನೀಡಿದ್ದಾರೆ.
ಜಮೀರ್ಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್, ಅಕ್ರಮ ಆಸ್ತಿ ಸಂಪಾದನೆ ಇದ್ದರೆ ಐಟಿ ದಾಳಿಯಾಗಬೇಕು. ಆದರೆ ಇಡಿಯವರು ದಾಳಿ ಮಾಡುವ ಅವಶ್ಯಕತೆಯಿಲ್ಲ. ಇದು ರಾಜಕೀಯ ಪ್ರೇರಿತವಾದ ದಾಳಿಯಿರಬಹುದು. ಶಾಸಕ ಜಮೀರ್ ಅಹ್ಮದ್ ಖಾನ್ ನಮ್ಮ ಪಕ್ಷದ ನಾಯಕ. ಅವರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಕಾನೂನು ವಿಚಾರದ ಬಗ್ಗೆ ಜಮೀರ್ ಅಹ್ಮದ್ಗೆ ಹೇಳಿದ್ದೇನೆ ಎಂದು ಹೇಳಿದರು.
ಇಡಿ ತನಿಖೆಯನ್ನ ನಾನು ಕೂಡಾ ಅನುಭವಿಸಿದ್ದೇನೆ. ಅವರ ಹಿಂದೆ ಪಕ್ಷ ಇದೆ, ನಾವಿದ್ದೇವೆ ಎಂದು ಹೇಳಿದ್ದೇವೆ. ಕಾನೂನು ಹೋರಾಟ ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.