ಪುಣೆ, ಆ 10 (DaijiworldNews/MS): ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನುತ್ತಾರೆ ಆದರೆ ಇಲ್ಲೊಬ್ಬ ವೈದ್ಯ ಹೆಂಡತಿಯೊಂದಿಗೆ ಜಗಳವಾಡಿ ಆಕೆಯ ಮುಡಿ ಕತ್ತರಿಸಿದ ಪರಿಣಾಮ ಪೊಲೀಸರ ಅತಿಥಿಯಾಗಿದ್ದಾನೆ.
ಮಹಾರಾಷ್ಟ್ರದ ಪುಣೆಯ ಧನೋರಿ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, 38 ವರ್ಷದ ವೈದ್ಯ ತನ್ನ ಪತ್ನಿಯೊಂದಿಗೆ ತೀವ್ರವಾಗಿ ವಾಗ್ವಾದ ಮಾಡಿದ ಬಳಿಕ ಪತ್ನಿಯ ಕೂದಲನ್ನು ಚಾಕುವಿನಿಂದ ಕತ್ತರಿಸಿ ಹಲ್ಲೆ ಮಾಡಿದ್ದಾನೆ. ಮುಡಿ ಕತ್ತರಿಸಿದ ಬಳಿಕ ಮಡದಿ ಸುಮ್ಮನಿರುವಳೇ? ಸೋಮವಾರ ಪೊಲೀಸರನ್ನು ಸಂಪರ್ಕಿಸಿದರು ಪತಿ ವಿರುದ್ದವೇ ದೂರು ನೀಡಿದ್ದಾಳೆ.
ಪೊಲೀಸ್ ಅಧಿಕಾರಿಯ ಪ್ರಕಾರ, " ಆರೋಪಿಯಾಗಿರುವ ವೈದ್ಯ ಕುಡಿದ ಅಮಲಿನಲ್ಲಿ ಮನೆಗೆ ಬಂದಿದ್ದು, ತನ್ನ ಸಹೋದರಿಯ ಮದುವೆಗೆ ಹಾಜರಾಗುವುದಾಗಿ ಹೇಳಿ ನಂತರ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಆ ಬಳಿಕ ಕೋಪದಿಂದ ಚಾಕುವಿನಿಂದ ಆಕೆಯ ಕೂದಲನ್ನು ಕತ್ತರಿಸಿ, ಅದರಿಂದ ಆಕೆಯ ಬೆನ್ನಿನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ" ಎಂದು ಹೇಳಿದ್ದಾರೆ.
ಸದ್ಯ ಆರೋಪಿಯನ್ನು ಐಪಿಸಿ ಸೆಕ್ಷನ್ 326 ಅಡಿ ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.