ಲಕ್ನೊ, ಆ.10(DaijiworldNews/HR): ತಾವು ಕೆಲಸ ಮಾಡುತ್ತಿರುವಲ್ಲಿ ವಲಸಿಗ ಕಾರ್ಮಿಕರು ಅಡುಗೆ ಅನಿಲವನ್ನು ಪಡೆಯಲು ಯಾವುದೇ ಪಡಿತರ ಚೀಟಿ ಅಥವಾ ಇನ್ನಿತರ ವಿಳಾಸ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಮಹೋಬದಲ್ಲಿ ಉಜ್ವಲ 2.0 ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉಜ್ವಲ 2.0 ರಲ್ಲಿ ವಲಸಿಗ ಕಾರ್ಮಿಕರು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. 'ಕುಟುಂಬ ಘೋಷಣೆ' ಹಾಗೂ 'ವಿಳಾಸದ ಪುರಾವೆ' ಎರಡಕ್ಕೂ ಸ್ವಯಂ ಘೋಷಣೆ ಸಾಕು ಎಂದಿದ್ದಾರೆ.
ಇನ್ನು ಪ್ರಧಾನಿ ಮೋದಿಯವರು ವರ್ಚುವಲ್ ಆಗಿ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪ್ರಧಾನಿ ಪರವಾಗಿ ಮಹಿಳೆಯರಿಗೆ ದಾಖಲೆಗಳನ್ನು ನೀಡಿದರು.
2016 ರಲ್ಲಿ ಆರಂಭವಾದ ಉಜ್ವಲ 1.0 ರಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು.
ಇನ್ನು 2021-22ರ ಕೇಂದ್ರ ಬಜೆಟ್ನಲ್ಲಿ ಉಜ್ವಲ ಯೋಜನೆಯಡಿ ಒಂದು ಕೋಟಿ ಹೆಚ್ಚುವರಿ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗುವುದು ಎಂದು ಘೋಷಿಸಲಾಗಿತ್ತು.