ನವದೆಹಲಿ, ಆ 10 (DaijiworldNews/PY): "30 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ 5, 886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ" ಎಂದು ಮಂಗಳವಾರ ಲೋಕಸಭೆಯಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಮಾಹಿತಿ ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
"1989 ರಿಂದ ಆಗಸ್ಟ್ 5, 2019ರವರೆಗೆ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ ಸುಮಾರು 5,886 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಸಂವಿಧಾನದ 370ನೇ ವಿಧಿ ರದ್ದತಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ನಡೆದ ಭದ್ರತಾ ಸಿಬ್ಬಂದಿಗಳ ಹತ್ಯೆ ಕುರಿತ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಿದ ಅವರು, ಜಮ್ಮು-ಕಾಶ್ಮೀರ ಭಯೋತ್ಪಾದಕರಿಂದ ಹಿಂಸಾಚಾರ ಪೀಡಿತವಾಗಿದೆ. ಅಲ್ಲದೇ, ಅದನ್ನು ಗಡಿಯುದ್ದಕ್ಕೂ ಬೆಂಬಲಿಸಲಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಾರಂಭವಾದಾಗಿನಿಂದ ಸುಮಾರು 5,886 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಹುತಾತ್ಮರಾದ ಭದ್ರತಾ ಪಡೆಯ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ" ಎಂದು ಹೇಳಿದ್ದಾರೆ.